ಗದಗ: ಮನೆಯ ಅಡಿಪಾಯ ತೆಗೆಯುವಾಗ ತಂಬಿಗೆಯೊಂದರಲ್ಲಿ ಒಂದು ಕೆ.ಜಿಯಷ್ಟು ನಿಧಿ ಪತ್ತೆಯಾಗಿರುವ ಘಟನೆ ಗದಗ ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ನಡೆದಿದೆ.
ಲಕ್ಕುಂಡಿ ಗ್ರಾಮದ ಗಂಗವ್ವ ಬಸವರಾಜ್ ರಿತ್ತಿ ಎಂಬುವವರ ಮನೆಯ ಜಾಗದಲ್ಲಿ ನಿಧಿ ಪತ್ತೆಯಾಗಿದೆ. ಮನೆ ಕಟ್ಟಲೆಂದು ಅಡಿಪಾಯ ತೆಗೆಯುತ್ತಿದ್ದ ವೇಳೆ ತಂಬಿಗೆಯಲ್ಲಿ ನಿಧಿ ಪತ್ತೆಯಾಗಿದೆ. ಸುಮಾರು ಒಂದು ಕೆ.ಜಿಯಷ್ಟು ಬಂಗಾರದ ಒಡವೆ, ಗಟ್ಟಿ ಸೇರಿದಂತೆ ಚಿನ್ನಾಭರಣಗಳು ಸಿಕ್ಕಿವೆ.
ತಂಬಿಗೆಯಲ್ಲಿ ಸಿಕ್ಕ ನಿಧಿಯನ್ನು ಮನೆಯವರು ಗ್ರಾಮದ ಗಣೇಶ ದೇಗುಲದಲ್ಲಿ ಇಟ್ಟಿದ್ದಾರೆ. ಬಳಿಕ ಪೊಲೀಸರು ಹಾಗೂ ಪುರಾತತ್ವ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಲಕ್ಕುಂಡಿ ಗ್ರಾಮಕ್ಕೆ ತಹಶಿಲ್ದಾರ್, ಪೊಲೀಸ್ ಅಧಿಕಾರಿಗಳು ಆಗಮಿಸಿದ್ದು, ನಿಧಿ ಸಿಕ್ಕ ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ. ನಿಧಿ ಸಿಕ್ಕಿರುವ ಜಾಗಕ್ಕೆ ಹಾಗೂ ನಿಧಿ ನೋಡಲು ಭಾರಿ ಸಂಖ್ಯೆಯಲ್ಲಿ ಜನಸಾಗರವೇ ಹರಿದು ಬರುತ್ತಿದೆ. ನಿಧಿಯನ್ನು ಇಟ್ಟಿರುವ ಗಣೇಶ ದೇಗುಲಕ್ಕೆ ಬಿಗಿ ಭದ್ರತೆ ಒದಗಿಸಲಾಗಿದ್ದು, ಶಸ್ತ್ರಸಜ್ಜಿತ ಪೊಲೀಸರನ್ನು ನಿಯೋಜಿಸಲಾಗಿದೆ.
































