ಲಕ್ನೋ : ಐಷಾರಾಮಿ ಸ್ಲೀಪರ್ ಬಸ್ಸೊಂದು ಟ್ರಕ್‌ಗೆ ಡಿಕ್ಕಿಯಾದ ಪರಿಣಾಮ ನಾಲ್ವರು ಪ್ರಯಾಣಿಕರು ಸಾವನ್ನಪ್ಪಿದ್ದು, 9 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ವಾರಣಾಸಿ ಬಳಿಯ ಜಾನ್‌ಪುರದಲ್ಲಿ ಸಂಭವಿಸಿದೆ.
ಪ್ರಯಾಣಿಕರನ್ನು ಛತ್ತೀಸ್‌ಗಢದಿಂದ ಅಯೋಧ್ಯೆ ಮತ್ತು ವಾರಣಾಸಿಯ ಧಾರ್ಮಿಕ ಸ್ಥಳಗಳಿಗೆ ಕರೆದೊಯ್ಯುತ್ತಿದ್ದ ವೇಳೆ ಈ ದುರಂತ ನಡೆದಿದೆ. ಅಪಘಾತದ ವೇಳೆ ಬಸ್ ನಲ್ಲಿ 50 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.
ಜಾನ್‌ಪುರದ ಬಳಿ ಬಸ್ ಓವರ್ ಟೇಕ್ ಮಾಡುವ ಭರದಲ್ಲಿ ಟ್ರಕ್‌ಗೆ ಡಿಕ್ಕಿಯಾಗಿದೆ. ಪರಿಣಾಮ ಬಸ್‌ನ ಒಂದು ಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ನಾಲ್ವರು ಪ್ರಯಾಣಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಒಂಭತ್ತು ಮಂದಿ ಗಂಭೀರ ಗಾಯಗೊಂಡಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ. ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.