ಶಿವಕಾಶಿ : ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿ ಇಬ್ಬರು ಮಹಿಳೆಯರು ಸೇರಿದಂತೆ ಕನಿಷ್ಠ ಐದು ಕಾರ್ಮಿಕರು ಸಾವನ್ನಪ್ಪಿದ ಘಟನೆ ತಮಿಳುನಾಡಿನ ವಿರುಧುನಗರ ಜಿಲ್ಲೆಯ ಶಿವಕಾಶಿಯಲ್ಲಿರುವ ಚಿನ್ನಕ್ಕಂಪಟ್ಟಿಯಲ್ಲಿ ಇಂದು ನಡೆದಿದೆ.
ಸ್ಫೋಟ ಸಂಭವಿಸಿದ ಪರಿಣಾಮ ಅನೇಕರು ಗಾಯಗೊಂಡಿದ್ದಾರೆ. ಇನ್ನು ಕಾರ್ಖಾನೆಯಿಂದ ದಟ್ಟ ಹೊಗೆ ಮೇಲೇರುತ್ತಿರುವುದು ಕಂಡುಬಂದಿದ್ದು, ಆವರಣದೊಳಗೆ ಪಟಾಕಿಗಳು ನಿರಂತರವಾಗಿ ಸಿಡಿಯುತ್ತಿವೆ. ಈ ಸ್ಥಳಕ್ಕೆ ತಲುಪಿದ ಪೊಲೀಸರು ಮತ್ತು ಅಗ್ನಿಶಾಮಕ ಸೇವೆಗಳ ಸಿಬ್ಬಂದಿ ಗಾಯಾಳುಗಳನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಇಂದು ಸಂಭವಿಸಿದ ಸ್ಫೋಟದಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ. ಕಟ್ಟಡದ ಅವಶೇಷಗಳನ್ನು ತೆರವುಗೊಳಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಅಗ್ನಿಶಾಮಕ ಮತ್ತು ರಕ್ಷಣಾ ಸೇವೆಗಳ ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಶಿವಕಾಶಿ ಬಳಿಯ ಚಿನ್ನಕಾಮನ್‌ಪಟ್ಟಿಯಲ್ಲಿರುವ ಖಾಸಗಿ ಪಟಾಕಿ ಉತ್ಪಾದನಾ ಘಟಕಕ್ಕೆ ಆಗಮಿಸಿದ ಕಂದಾಯ ಅಧಿಕಾರಿಗಳು ಮತ್ತು ಪೊಲೀಸರು ಈ ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಗಾಯಾಳುಗಳನ್ನು ಶಿವಕಾಶಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಮೃತರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಕಾರ್ಖಾನೆಯಲ್ಲಿ ಕಾರ್ಮಿಕರು ದಿನನಿತ್ಯದ ಕೆಲಸದಲ್ಲಿ ತೊಡಗಿದ್ದಾಗ ಭಾರೀ ಸ್ಫೋಟ ಸಂಭವಿಸಿದೆ. ಸ್ಫೋಟದಿಂದಾಗಿ ಕಟ್ಟಡದ ಆವರಣದಲ್ಲಿರುವ ಹಲವಾರು ಕೊಠಡಿಗಳನ್ನು ನೆಲಸಮಗೊಳಿಸಿದೆ.
ಸ್ಫೋಟಕ ರಾಸಾಯನಿಕಗಳನ್ನು ಸರಿಯಾಗಿ ನಿರ್ವಹಿಸದ ಕಾರಣದಿಂದ ಸ್ಫೋಟ ಸಂಭವಿಸಿದೆ ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಆದರೆ ಸ್ಫೋಟಕ್ಕೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ. ಈಗಾಗಲೇ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.