ಬೆಳಗಾವಿ : ಇಂದಿನ ಆಧುನಿಕ ಯುಗದಲ್ಲಿ ಮಕ್ಕಳು ಮಾತ್ರವಲ್ಲ, ವೃದ್ಧರೂ ಸಹ ಮೊಬೈಲ್ ಮತ್ತು ಟಿವಿಯ ಮಾಯಾಲೋಕಕ್ಕೆ ಅಂಟಿಕೊಂಡಿದ್ದಾರೆ. ಇದರ ಪರಿಣಾಮವಾಗಿ ಮಕ್ಕಳ ಓದು, ಕುಟುಂಬದ ಆತ್ಮೀಯತೆ ಮತ್ತು ಸಾಮಾಜಿಕ ಬಾಂಧವ್ಯಕ್ಕೆ ಧಕ್ಕೆಯಾಗುತ್ತಿರುವುದನ್ನು ಮನಗಂಡ ಬೆಳಗಾವಿ ತಾಲೂಕಿನ ಹಲಗಾ ಗ್ರಾಮದವರು ಮಾದರಿ ಮತ್ತು ಕ್ರಾಂತಿಕಾರಿ ಪ್ರಯೋಗಕ್ಕೆ ಮುಂದಾಗಿದ್ದಾರೆ. ಅದೇ ‘ಡಿಜಿಟಲ್ ಆಫ್’ ಅಭಿಯಾನ.
ಮಹಾರಾಷ್ಟ್ರದ ಹಳ್ಳಿಯೊಂದರ ಯಶಸ್ವಿ ಮಾದರಿಯನ್ನು ಅನುಸರಿಸಿ, ಹಲಗಾ ಗ್ರಾಮಸ್ಥರು ಪ್ರತಿದಿನ ಸಂಜೆ ಎರಡು ಗಂಟೆಗಳ ಕಾಲ ಯಾವುದೇ ಡಿಜಿಟಲ್ ಸಾಧನಗಳನ್ನು ಬಳಸದೇ ಇರಲು ತೀರ್ಮಾನಿಸಿದ್ದಾರೆ. ಡಿಸೆಂಬರ್ 17ರಿಂದ ಅಧಿಕೃತವಾಗಿ ಜಾರಿಗೊಂಡಿರುವ ಈ ಅಭಿಯಾನದಂತೆ, ಪ್ರತಿದಿನ ಸಂಜೆ 7ರಿಂದ ರಾತ್ರಿ 9ರವರೆಗೆ ಗ್ರಾಮದಲ್ಲಿನ ಎಲ್ಲ ಮನೆಗಳಲ್ಲಿ ಮೊಬೈಲ್ ಹಾಗೂ ಟಿವಿಗಳನ್ನು ಸಂಪೂರ್ಣವಾಗಿ ಸ್ವಿಚ್ ಆಫ್ ಮಾಡಲಾಗುತ್ತದೆ.
ಸೈರನ್ ಮೊಳಗಿದರೆ ಡಿಜಿಟಲ್ ಸಾಧನಗಳಿಗೆ ವಿರಾಮ : ಗ್ರಾಮ ಪಂಚಾಯಿತಿ ಪ್ರತಿದಿನ ಸಂಜೆ 7 ಗಂಟೆಗೆ ಸೈರನ್ ಮೊಳಗಿಸುತ್ತದೆ. ಸೈರನ್ ಕೇಳುತ್ತಿದ್ದಂತೆಯೇ ಗ್ರಾಮಸ್ಥರು ಸ್ವಯಂಪ್ರೇರಿತವಾಗಿ ಟಿವಿ ಆಫ್ ಮಾಡಿ ಮೊಬೈಲ್‌ಗಳನ್ನು ಪಕ್ಕಕ್ಕಿಡುತ್ತಾರೆ. ರಾತ್ರಿ 9 ಗಂಟೆಗೆ ಮತ್ತೊಮ್ಮೆ ಸೈರನ್ ಮೊಳಗಿದ ನಂತರ ಮಾತ್ರ ಡಿಜಿಟಲ್ ಸಾಧನಗಳ ಬಳಕೆ ಮತ್ತೆ ಆರಂಭವಾಗುತ್ತದೆ.
ಮಕ್ಕಳ ಓದಿಗೆ ಮೊದಲ ಆದ್ಯತೆ : ಈ ಎರಡು ಗಂಟೆಗಳ ಅವಧಿಯನ್ನು ಸಂಪೂರ್ಣವಾಗಿ ಮಕ್ಕಳ ವಿದ್ಯಾಭ್ಯಾಸಕ್ಕೆ ಮೀಸಲಿಡಲಾಗಿದೆ. ಪೋಷಕರು ಮಕ್ಕಳ ಜೊತೆ ಕೂತು ಪಾಠಗಳಿಗೆ ನೆರವಾಗುತ್ತಿದ್ದಾರೆ. ಮೊಬೈಲ್ ಅಡ್ಡಿಪಡಿಸುವಿಕೆ ಇಲ್ಲದ ಕಾರಣ ಮಕ್ಕಳು ಹೆಚ್ಚಿನ ಏಕಾಗ್ರತೆಯಿಂದ ಓದುತ್ತಿದ್ದು, ಹಿರಿಯರೊಂದಿಗೆ ಕಾಲ ಕಳೆಯುವುದು, ಸಂಸ್ಕೃತಿಕ ಚಟುವಟಿಕೆಗಳು ಹಾಗೂ ಕುಟುಂಬ ಸಂಭಾಷಣೆಗೆ ಸಹ ಈ ಸಮಯವನ್ನು ಬಳಸಲಾಗುತ್ತಿದೆ.
ಗ್ರಾಮಸ್ಥರಿಂದ ಅಭೂತಪೂರ್ವ ಬೆಂಬಲ : ಗ್ರಾಮ ಪಂಚಾಯಿತಿಯ ಈ ನಿರ್ಧಾರಕ್ಕೆ ಇಡೀ ಹಲಗಾ ಗ್ರಾಮವೇ ಬೆಂಬಲ ನೀಡಿದೆ. ಆರಂಭದಲ್ಲಿ ಸ್ವಲ್ಪ ಕಷ್ಟವಾದರೂ, ಇದೀಗ ಗ್ರಾಮಸ್ಥರು ಈ ಪದ್ಧತಿಗೆ ಸಂಪೂರ್ಣವಾಗಿ ಒಗ್ಗಿಕೊಂಡಿದ್ದಾರೆ. “ನಮ್ಮ ಮಕ್ಕಳ ಭವಿಷ್ಯ ಮತ್ತು ಮನೆಯಲ್ಲಿ ನೆಮ್ಮದಿಯ ವಾತಾವರಣಕ್ಕಾಗಿ ಈ ನಿರ್ಧಾರ ಅಗತ್ಯವಾಗಿತ್ತು” ಎಂದು ಗ್ರಾಮಸ್ಥರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಡಿಜಿಟಲ್ ಯುಗದಲ್ಲಿ ಮೊಬೈಲ್ ವ್ಯಸನದಿಂದ ದೂರವಿರುವುದು ಸವಾಲಿನ ವಿಷಯವಾಗಿರುವಾಗ, ಹಲಗಾ ಗ್ರಾಮದ ಈ ಪ್ರಯತ್ನ ರಾಜ್ಯದ ಇತರೆ ಗ್ರಾಮಗಳಿಗೆ ದಾರಿದೀಪವಾಗಿದ್ದು, ಸೈಬರ್ ಜಗತ್ತಿನಿಂದ ಹೊರಬಂದು ನೈಜ ಜೀವನದತ್ತ ಸಾಗುತ್ತಿರುವ ಈ ನಡೆ ನಿಜಕ್ಕೂ ಶ್ಲಾಘನೀಯ.

































