ಚಂಢೀಗಢ: ಪಂಜಾಬ್‌ನ ಲೂಧಿಯಾನ ಜಿಲ್ಲೆಯ ಜಗ್ರಾಂವ್‌ನಲ್ಲಿ ರಾಷ್ಟ್ರಮಟ್ಟದ ಕಬಡ್ಡಿ ಆಟಗಾರನೊಬ್ಬನನ್ನು ದುಷ್ಕರ್ಮಿಗಳು ಹಾಡಹಗಲೇ ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ಸ್ಥಳೀಯರಲ್ಲಿ ಆತಂಕ ಉಂಟುಮಾಡಿದೆ. ಮೃತನನ್ನು 26 ವರ್ಷದ ತೇಜ್‌ಪಾಲ್ ಸಿಂಗ್ ಎಂದು ಗುರುತಿಸಲಾಗಿದೆ.
ಈ ಭೀಕರ ಘಟನೆ ಲೂಧಿಯಾನ ಗ್ರಾಮೀಣ ವಿಭಾಗದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಬಳಿ ಶುಕ್ರವಾರ ಮಧ್ಯಾಹ್ನ ನಡೆದಿದೆ. ತೇಜ್‌ಪಾಲ್ ಸಿಂಗ್ ಜಗ್ರಾಂವ್ ಸಮೀಪದ ಗಿಡ್ಡರ್‌ವಿಂಡಿ ಗ್ರಾಮದ ನಿವಾಸಿಯಾಗಿದ್ದು, ಪಂಜಾಬ್ ಪರ ಕಬಡ್ಡಿ ಪಂದ್ಯಗಳಲ್ಲಿ ರಾಷ್ಟ್ರಮಟ್ಟದಲ್ಲಿ ಹಲವು ಬಾರಿ ಆಡಿದ್ದರು ಎಂದು ತಿಳಿದುಬಂದಿದೆ.
ಪೊಲೀಸರ ಪ್ರಕಾರ, ತೇಜ್‌ಪಾಲ್ ಇಬ್ಬರು ಸ್ನೇಹಿತರೊಂದಿಗೆ ಹರಿ ಸಿಂಗ್ ಆಸ್ಪತ್ರೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ, ಐದರಿಂದ ಆರು ಜನರಿದ್ದ ದುಷ್ಕರ್ಮಿಗಳ ಗುಂಪು ಅವರನ್ನು ಅಡ್ಡಗಟ್ಟಿ ದಾಳಿ ನಡೆಸಿದೆ. ಮೊದಲು ದೊಣ್ಣೆಯಿಂದ ಥಳಿಸಿದ ನಂತರ, ಅವರಲ್ಲಿ ಒಬ್ಬನು ರಿವಾಲ್ವರ್‌ನ್ನು ಹೊರತೆಗೆದು ತೇಜ್‌ಪಾಲ್ ಅವರ ಎದೆಗೆ ಗುಂಡು ಹಾರಿಸಿದ್ದಾನೆ. ದಾಳಿಯ ನಂತರ ಆರೋಪಿ ಗುಂಪು ಸ್ಥಳದಿಂದ ಪರಾರಿಯಾಗಿದ್ದು, ಗಾಯಗೊಂಡ ತೇಜ್‌ಪಾಲ್ ಅವರನ್ನು ಸ್ನೇಹಿತರು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದರೂ ಅವರು ಅಷ್ಟರಲ್ಲೇ ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪೊಲೀಸ್ ತನಿಖೆ ಪ್ರಾಥಮಿಕ ಹಂತದಲ್ಲಿದ್ದು, ಹಳೆಯ ದ್ವೇಷವೇ ಈ ಕೊಲೆಗೆ ಕಾರಣ ಎನ್ನುವ ಶಂಕೆ ವ್ಯಕ್ತವಾಗಿದೆ. ಆರೋಪಿಗಳ ಗುರುತು ಪತ್ತೆಯಾಗಿದ್ದು, ಅವರನ್ನು ಬಂಧಿಸಲು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಎಸ್‌ಎಸ್‌ಪಿ ಅಂಕುರ್ ಗುಪ್ತಾ ತಿಳಿಸಿದ್ದಾರೆ. ಘಟನಾ ಸ್ಥಳದ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಘಟನೆ ನಡೆದ ಸ್ಥಳ ಜಿಲ್ಲಾಕೇಂದ್ರದಿಂದ ಸುಮಾರು 45 ಕಿಲೋಮೀಟರ್ ದೂರದಲ್ಲಿದ್ದು, ಹಾಡು ಹಗಲೇ ನಡೆದ ಈ ಹತ್ಯೆ ಸ್ಥಳೀಯರಲ್ಲಿ ಭೀತಿಯ ವಾತಾವರಣ ಉಂಟುಮಾಡಿದೆ. ರಾಷ್ಟ್ರಮಟ್ಟದ ಕಬಡ್ಡಿ ವಲಯದಲ್ಲಿಯೂ ತೇಜ್‌ಪಾಲ್ ಸಿಂಗ್ ಅವರ ಸಾವಿನ ಸುದ್ದಿ ಆಘಾತ ಮೂಡಿಸಿದೆ.
































