ಹೈದರಾಬಾದ್ : ಆಂಧ್ರ ಪ್ರದೇಶದಲ್ಲಿ ಇಂದು ಬೆಳಗಿನ ಜಾವ ನಡೆದ ಎನ್ಕೌಂಟರ್ನಲ್ಲಿ ಟಾಪ್ ನಕ್ಸಲ್ ಕಮಾಂಡರ್ ಮಾಡ್ವಿ ಹಿಡ್ಮಾ ಸಾವನ್ನಪ್ಪಿದ್ದಾನೆ ಎನ್ನುವ ಮಾಹಿತಿ ಲಭ್ಯವಾಗಿದೆ. ಈತ 26 ಸಶಸ್ತ್ರ ದಾಳಿಗಳ ರೂವಾರಿಯಾಗಿದ್ದ. ಹಿಡ್ಮಾ ಆಂಧ್ರ ಪ್ರದೇಶದ ಅಲ್ಲೂರಿ ಸೀತಾರಾಮರಾಜು ಜಿಲ್ಲೆಯಲ್ಲಿ ನಡೆದ ಎನ್ಕೌಂಟರ್ನಲ್ಲಿ ಹತನಾಗಿದ್ದಾನೆ. ಹಲವಾರು ಮಾವೋವಾದಿ ಅಡಗುತಾಣಗಳನ್ನು ಹೊಂದಿರುವ ಆಂಧ್ರ ಪ್ರದೇಶ, ಛತ್ತೀಸ್ಗಢ ಮತ್ತು ತೆಲಂಗಾಣ ರಾಜ್ಯಗಳ ತ್ರಿ-ಜಂಕ್ಷನ್ ಬಳಿ ಈ ಎನ್ಕೌಂಟರ್ ನಡೆದಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.
ಕನಿಷ್ಠ ಆರು ಬಂಡುಕೋರರ ಮೃತದೇಹಗಳು ಪತ್ತೆಯಾಗಿದ್ದು, ಕಾರ್ಯಾಚರಣೆ ಇನ್ನೂ ಮುಂದುವರಿದಿದೆ. 1981ರಲ್ಲಿ ಮಧ್ಯಪ್ರದೇಶದಲ್ಲಿದ್ದ ಸುಕ್ಮಾದಲ್ಲಿ ಜನಿಸಿದ ಹಿಡ್ಮಾ, ಪೀಪಲ್ಸ್ ಲಿಬರೇಶನ್ ಗೆರಿಲ್ಲಾ ಆರ್ಮಿಯ ಬೆಟಾಲಿಯನ್ ಮುನ್ನಡೆಸುತ್ತಿದ್ದ ಮತ್ತು ಸಿಪಿಐ ಮಾವೋವಾದಿಗಳ ಉನ್ನತ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯ ಸದಸ್ಯ ಕೂಡ ಆಗಿದ್ದ.
ಕೇಂದ್ರ ಸಮಿತಿಯಲ್ಲಿರುವ ಬಸ್ತಾರ್ ಪ್ರದೇಶದ ಏಕೈಕ ಬುಡಕಟ್ಟು ಸದಸ್ಯನಾಗಿದ್ದ ಹಿಡ್ಮಾನನ್ನು ಹಿಡಿದುಕೊಟ್ಟವರಿಗೆ 1 ಕೋಟಿ ರೂ. ಬಹುಮಾನ ನೀಡುವುದಾಗಿ ಘೋಷಿಸಲಾಗಿತ್ತು. ಆತನ ಪತ್ನಿ ರಾಜೆ ಅಲಿಯಾಸ್ ರಾಜಕ್ಕಾ ಕೂಡ ಎನ್ಕೌಂಟರ್ನಲ್ಲಿ ಸಾವನ್ನಪ್ಪಿದ್ದಾಳೆಂದು ತಿಳಿದುಬಂದಿದೆ.
ಮಾಡ್ವಿ ಹಿಡ್ಮಾ 1996ರಿಂದ ನಕ್ಸಲ್ ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದಾನೆ. ಆಗ ಆತನಿಗೆ ಕೇವಲ 17 ವರ್ಷ ವಯಸ್ಸಾಗಿತ್ತು. ಹಿಡ್ಮಾನನ್ನು ಹಿದ್ಮಾಲು ಹಾಗೂ ಸಂತೋಷ್ ಹೆಸರಿನಿಂದ ಕೂಡ ಕರೆಯಲಾಗುತ್ತಿತ್ತು. ಈತ 150ಕ್ಕೂ ಅಧಿಕ ಸೈನಿಕರನ್ನು ಕೊಂದಿದ್ದ. 2021ರ ಏಪ್ರಿಲ್ 3ರಂದು ನಕ್ಸಲರು ಸೈನಿಕರ ಮೇಲೆ ದಾಳಿ ಮಾಡಿದ ಪರಿಣಾಮವಾಗಿ ನಂತರದ ಎನ್ಕೌಂಟರ್ನಲ್ಲಿ 22 ಸೈನಿಕರು ಸಾವನ್ನಪ್ಪಿದ್ದರು. ಇದು ಹಿಡ್ಮಾ ನೇತೃತ್ವದ ನಕ್ಸಲ್ ಪಡೆಯ ಕೃತ್ಯವಾಗಿತ್ತು.































