ಮುಂಬೈ: ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಶೌಚಾಲಯದ ಕಸದ ತೊಟ್ಟಿಯಲ್ಲಿ ನವಜಾತ ಶಿಶುವಿನ ಶವ ಪತ್ತೆಯಾದ ಘಟನೆ ಬೆಚ್ಚಿಬೀಳಿಸುವಂತಾಗಿದೆ.
ಮಂಗಳವಾರ (ಮಾರ್ಚ್ 26) ರಾತ್ರಿ 1.30ರ ಸುಮಾರಿಗೆ ವಿಮಾನ ನಿಲ್ದಾಣದ ಸಿಬ್ಬಂದಿ ಶವ ಪತ್ತೆಯಾದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಸಹರ್ ಪೊಲೀಸ್ ಅಧಿಕಾರಿಗಳು, ಶಿಶುವಿನ ದೇಹವನ್ನು ಪರಿಶೀಲಿಸಿ, ಹೆಚ್ಚಿನ ಪರೀಕ್ಷೆಗಾಗಿ ಕೂಪರ್ ಆಸ್ಪತ್ರೆಗೆ ರವಾನಿಸಿದ್ದಾರೆ.
ಈ ದುರ್ಘಟನೆ ಹಿಂದೆ ಯಾರು ಇದ್ದಾರೆ ಎಂಬುದನ್ನು ಪತ್ತೆಹಚ್ಚಲು ಪೊಲೀಸರು ವಿಮಾನ ನಿಲ್ದಾಣದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಈ ಸಂಬಂಧ ಅಪರಿಚಿತ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಲಾಗಿದೆ.
ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದು, ಮಗುವನ್ನು ತ್ಯಜಿಸಲು ಕಾರಣರಾದವರ ಪತ್ತೆಗಾಗಿ ತೀವ್ರ ಶೋಧ ನಡೆಸುತ್ತಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.