ಲಕ್ನೋ : ದೆಹಲಿಯಿಂದ ಲಕ್ನೋಗೆ ಬಂದಿಳಿದ ಏರ್ ಇಂಡಿಯಾ ವಿಮಾನದಲ್ಲಿ ಪ್ರಯಾಣಿಕರೊಬ್ಬರು ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದ ಲಕ್ನೋ ಚೌಧರಿ ಚರಣ್ ಸಿಂಗ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಭವಿಸಿದೆ.
ಮೃತರನ್ನು ಬಿಹಾರದ ಗೋಪಾಲ್‌ಗಂಜ್‌ನ ಆಸಿಫುಲ್ಲಾ ಅನ್ಸಾರಿ(52) ಎಂದು ಗುರುತಿಸಲಾಗಿದೆ.
ಬೆಳಗ್ಗೆ 8.10 ಕ್ಕೆ ವಿಮಾನ ಲಕ್ನೋದ ಚೌಧರಿ ಚರಣ್ ಸಿಂಗ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಿತ್ತು. ಆ ಬಳಿಕ ಸಿಬ್ಬಂದಿ ಆಸಿಫುಲ್ಲಾರೊಂದಿಗೆ ಮಾತನಾಡಲು, ಎಬ್ಬಿಸಲು ಪ್ರಯತ್ನಿಸಿದ್ದಾರೆ. ಆದರೆ ಆಸಿಫುಲ್ಲಾರಿಂದ ಯಾವುದೇ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ನಂತರ ವಿಮಾನದಲ್ಲಿದ್ದ ವೈದ್ಯರು ಪ್ರಯಾಣಿಕನನ್ನು ಪರೀಕ್ಷಿಸಿದ ವೇಳೆ ಅವರು ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.
ಪ್ರಯಾಣಿಕ ತನ್ನ ಸೀಟ್ ಬೆಲ್ಟ್ ಅನ್ನು ಬಿಚ್ಚಿರಲಿಲ್ಲ, ವಿಮಾನ ಲಕ್ನೋಗೆ ಬರುವ ಮುನ್ನವೇ ಆತ ಸಾವನ್ನಪ್ಪಿರಬೇಕೆಂದು ವೈದ್ಯರು ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆಗೆ ಮೃತ ದೇಹ ರವಾನಿಸಲಾಗಿದ್ದು, ವರದಿ ಬಂದ ಬಳಿಕವಷ್ಟೇ ಸಾವಿಗೆ ನಿಖರ ಕಾರಣ ತಿಳಿದುಬರಲಿದೆ. ಇನ್ನು ಈ ಬಗ್ಗೆ ಪೊಲೀಸರು ಸಮಗ್ರ ತನಿಖೆ ಆರಂಭಿಸಿದ್ದಾರೆ.