ನವದೆಹಲಿ: ಕಾಂಗ್ರೆಸ್ ನಾಯಕ ಮತ್ತು ಸಂಸತ್ ಸದಸ್ಯ ಕೆ.ಸಿ. ವೇಣುಗೋಪಾಲ್ ಸೇರಿದಂತೆ ಹಲವು ಸಂಸದರನ್ನು ತಿರುವನಂತಪುರಂನಿಂದ ದೆಹಲಿಗೆ ಹೊತ್ತೊಯ್ಯುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ವಿಮಾನವನ್ನು ಚೆನ್ನೈಯಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದ್ದು ಈ ವೇಳೆ ದೊಡ್ಡ ದುರಂತವೊಂದು ಸಂಭವಿಸುವುದಿತ್ತು. ಆದರೆ ಪೈಲೆಟ್ ಗಳ ಸಮಯ ಪ್ರಜ್ಞೆಯಿಂದ ತಪ್ಪಿದೆ ಎಂದು ಕಾಂಗ್ರೆಸ್ ನಾಯಕ ಕೆಸಿ ವೇಣುಗೋಪಾಲ್ ಟ್ವಿಟ್ ಮಾಡಿದ್ದಾರೆ.
ಭಾನುವಾರ ಸಂಜೆ ಈ ಘಟನೆ ನಡೆದಿದ್ದು ಈ ಕುರಿತು ಕಾಂಗ್ರೆಸ್ ನಾಯಕ ಕೆಸಿ ವೇಣುಗೋಪಾಲ್ ತನ್ನ X ಖಾತೆಯಲ್ಲಿ ಪೋಸ್ಟ್ ಒಂದನ್ನು ಹಾಕಿದ್ದು ಇದರಲ್ಲಿ ತಮ್ಮ ಪ್ರಯಾಣದ ಸಮಯದಲ್ಲಿ ತಾವು ಅನುಭವಿಸಿದ ಕಹಿ ಘಟನೆಯ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಭಾನುವಾರ ತಿರುವನಂತಪುರಂ ನಿಂದ ದೆಹಲಿಗೆ ಹೊರಟಿದ್ದ ಏರ್ ಇಂಡಿಯಾ ವಿಮಾನ (AI 2455) ಮಧ್ಯಾಹ್ನ ಟೇಕ್ ಆಫ್ ಆಗುತ್ತಿದ್ದಂತೆ ತಾಂತ್ರಿಕ ದೋಷ ಕಂಡುಬಂದಿದ್ದು ಇದಾದ ಬಳಿಕ ವಿಮಾನವನ್ನು ಪೈಲೆಟ್ ಚೆನ್ನೈ ಗೆ ತಿರುಗಿಸಿದ್ದು ಆದರೆ ಚೆನ್ನೈಯಲ್ಲಿ ಲ್ಯಾಂಡ್ ಆಗಲು ಸುಮಾರು ಎರಡು ಗಂಟೆ ಹಾರಾಟ ನಡೆಸಬೇಕಾಯಿತು ಕೊನೆಗೆ ಲ್ಯಾಂಡಿಂಗ್ ಗೆ ಅನುಮತಿ ದೊರೆಯಿತು. ಪೈಲೆಟ್ ಲ್ಯಾಂಡ್ ಮಾಡುತ್ತಿದ್ದಂತೆ ರನ್ ವೇ ಯಲ್ಲಿ ಇನ್ನೊಂದು ವಿಮಾನ ಇದ್ದ ಪರಿಣಾಮ ಪೈಲೆಟ್ ಕೂಡಲೇ ಎಚ್ಚೆತ್ತು ವಿಮಾನವನ್ನು ಮತ್ತೆ ಟೇಕ್ ಆಫ್ ಮಾಡಿ ನಮ್ಮೆಲ್ಲರ ಜೀವ ಉಳಿಸಿದ್ದಾರೆ ಇಲ್ಲವಾದರೆ ದೊಡ್ಡ ಅನಾಹುತ ಸಂಭವಿಸುವ ಸಾಧ್ಯತೆ ಇತ್ತು ಎಂದು ಟ್ವಿಟ್ ಮಾಡಿದ್ದಾರೆ.
ಇದಾದ ಬಳಿಕ ಎರಡನೇ ಪ್ರಯತ್ನದಲ್ಲಿ ವಿಮಾನವನ್ನು ಸುರಕ್ಷಿತವಾಗಿ ಲ್ಯಾಂಡ್ ಮಾಡಲಾಯಿತು ಎಂದು ಹೇಳಿಕೊಂಡಿದ್ದಾರೆ, ನಿಜಕ್ಕೂ ಪೈಲೆಟ್ ಸಮಯಪ್ರಜ್ಞೆಯಿಂದ ನಾವು ಬದುಕಿದ್ದೇವೆ ಎಂದು ಹೇಳಿಕೊಂಡಿದ್ದಾರೆ.
ಈ ಘಟನೆ ಕುರಿತು ತನಿಖೆ ನಡೆಸಬೇಕು ಜೊತೆಗೆ ಇಂತಹ ಘಟನೆಗಳು ಮುಂದೆಂದೂ ನಡೆಯಬಾರದು ಎಂದು ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ನಾಗರಿಕ ವಿಮಾನಯಾನ ನಿರ್ದೇಶನಾಲಯಕ್ಕೆ ಕಾಂಗ್ರೆಸ್ ನಾಯಕ ಆಗ್ರಹಿಸಿದ್ದಾರೆ