ಕೊಯಮತ್ತೂರು : ಕೇರಳದ ಕೊಯಮತ್ತೂರಿನ ಕಿಂಗ್ಸ್ ಜನರೇಷನ್ ಚರ್ಚ್‌ನ ಪಾದ್ರಿ ಜಾನ್ ಜೆಬರಾಜ್ ಅವರನ್ನು ಇಬ್ಬರು ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಬಂಧಿಸಲಾಗಿದೆ.
ಸೋಶಿಯಲ್ ಮೀಡಿಯಾದಲ್ಲಿ ಅನೇಕ ಫಾಲೋವರ್‌ಗಳನ್ನು ಹೊಂದಿರುವ 37 ವರ್ಷದ ಜಾನ್ ಜೆಬರಾಜ್ ಹಲವು ತಿಂಗಳಿಂದ ತಲೆ ಮರೆಸಿಕೊಂಡಿದ್ದರು. ಜೆಬರಾಜ್ ಅವರನ್ನು ಕೊಯಮತ್ತೂರು ನಗರ ಪೊಲೀಸರು ಶನಿವಾರ ಸಂಜೆ ಇಡುಕ್ಕಿ ಜಿಲ್ಲೆಯ ಮುನ್ನಾರ್‌ನಲ್ಲಿ ಬಂಧಿಸಿದ್ದಾರೆ.
ಇನ್‌ಸ್ಟಾಗ್ರಾಮ್‌ನಲ್ಲಿ 1,98,000 ಕ್ಕೂ ಹೆಚ್ಚು ಅನುಯಾಯಿಗಳನ್ನು ಜೆಬರಾಜ್ ಅವರು ಹೊಂದಿದ್ದಾರೆ. ಅವರನ್ನು ಬಂಧಿಸಲಾಗಿರುವ ಲೈಂಗಿಕ ದೌರ್ಜನ್ಯ ಪ್ರಕರಣವು ಕಳೆದ ವರ್ಷ ಮೇ ತಿಂಗಳ ಹಿಂದಿನದು ಎಂದು ತಿಳಿದುಬಂದಿದೆ.
ಕೊಯಮತ್ತೂರಿನ ತಮ್ಮ ಮನೆಯಲ್ಲಿ ನಡೆದ ಪಾರ್ಟಿಯೊಂದರಲ್ಲಿ ಜೆಬರಾಜ್ ಅವರು ಇಬ್ಬರು ಅಪ್ರಾಪ್ತ ಬಾಲಕಿಯರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಇತ್ತೀಚೆಗೆ ಸಂತ್ರಸ್ತೆಯೊಬ್ಬಳು ನಡೆದ ಘಟನೆಯ ಬಗ್ಗೆ ಕುಟುಂಬದ ಸದಸ್ಯರಿಗೆ ತಿಳಿಸಿದ್ದು, ಈ ಸಂಬಂಧ ಕೇಂದ್ರ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ವರದಿಯಾಗಿದೆ.
ಪೊಲೀಸರು ತನಿಖೆಯನ್ನು ಮುಂದುವರಿಸಿದ್ದು, ಜೆಬರಾಜ್ ವಿರುದ್ಧ ಪೋಕ್ಸೊ ಕಾಯ್ದೆಯ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.