ಆಪ್ಟಿಕಲ್ ಫೈಬರ್ ಕೇಬಲ್ ಬಳಸಿ ಡಿಜಿಟಲ್ ಸೇವೆಗಳು ಮತ್ತು ಆರ್ಥಿಕ ಅವಕಾಶಗಳನ್ನು ಗ್ರಾಮೀಣ ಪ್ರದೇಶಗಳಿಗೆ ತಲುಪಿಸುವ ದೂರ ಸಂಪರ್ಕ ಆಧಾರಿತ ಸಮೃದ್ಧ ಗ್ರಾಮ ಪಂಚಾಯತ್ ಯೋಜನೆಯನ್ನು ಜಾರಿಗೊಳಿಸಲು ರಾಜ್ಯದಲ್ಲಿ 205 ಗ್ರಾಮ ಪಂಚಾಯತ್‌ಗಳನ್ನು ಆಯ್ಕೆ ಮಾಡಲಾಗಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಗ್ರಾಮೀಣ ಪ್ರದೇಶದಲ್ಲಿ ಡಿಜಿಟಲ್ ಪರಿವರ್ತನೆಗೆ ಪ್ರೇರಕ ಶಕ್ತಿಯಾಗಿ ಕಾರ್ಯನಿರ್ವಹಿಸುವ ಮೂಲಕ ಸಾಮಾಜಿಕ, ಆರ್ಥಿಕ ಅಭಿವೃದ್ದಿಗೆ ಸಮೃದ್ಧ ಗ್ರಾಮ ಪಂಚಾಯತ್ ಯೋಜನೆಯು ಉತ್ತೇಜನ ನೀಡುತ್ತದೆ, ಗ್ರಾಮಗಳ ಸಾಮಾಜಿಕ, ಆರ್ಥಿಕ ಅಭಿವೃದ್ಧಿಗೆ ಪೂರಕವಾಗಿ ಗ್ರಾಮೀಣ ಸಮುದಾಯಗಳು, ಸಾರ್ವಜನಿಕ ಹಾಗೂ ಖಾಸಗಿ ಸಂಸ್ಥೆಗಳು ಮತ್ತು ಗ್ರಾಮ ಮಟ್ಟದ ಉದ್ಯಮಿಗಳು ಹಾಗೂ ಸಂಸ್ಥೆಗಳಿಗೆ ಹೆಚ್ಚಿನ ವೇಗದ ಬ್ರಾಡ್ ಬ್ಯಾಂಡ್ ಸಂಪರ್ಕದ ಪ್ರಯೋಜನಗಳ ಬಗ್ಗೆ ಅರಿವು ಮೂಡಿಸಲು ಗ್ರಾಮಗಳಲ್ಲಿ ಫೈಬರ್ ಸಂಪರ್ಕದ ಸಮರ್ಥ ಬಳಕೆಗಾಗಿ ತಾಂತ್ರಿಕ ತಜ್ಞರು, ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಪಂಚಾಯತ್ ರಾಜ್ ಸಂಸ್ಥೆಗಳ ಸದಸ್ಯರನ್ನು ಒಳಗೊಂಡ ಗ್ರಾಮಪಂಚಾಯತ್ ಡಿಜಿಟಲ್ ಆಕ್ಸೆಸ್ ಸಮಿತಿಯನ್ನು ರಚಿಸಲಾಗುವುದು ಎಂದು ಮಾಹಿತಿ ನೀಡಿದರು.