ಕೊಪ್ಪಳ: ಕನ್ನಡ ಮಾತನಾಡಿ ಎಂದಿದ್ದಕ್ಕೆ ಪ್ರಯಾಣಿಕನ ಮೇಲೆ ಟಿಕೆಟ್ ಕಲೆಕ್ಟರ್ ಹಲ್ಲೆ ಮಾಡಿರುವ ಘಟನೆ ಮೈಸೂರು-ಕೊಪ್ಪಳ ರೈಲಿನಲ್ಲಿ ನಡೆದಿದೆ. ಏ.24ರಂದು ರೈಲಿನಲ್ಲಿ ಮೈಸೂರಿನಿಂದ ಕೊಪ್ಪಳಕ್ಕೆ ಪ್ರಯಾಣಿಕರೊಬ್ಬರು ಸಂಚರಿಸುತ್ತಿದ್ದರು. ಬೆಂಗಳೂರಿನ ಯಲಹಂಕ ತಲುಪಿದಾಗ ಟಿಕೆಟ್ ತಪಾಸಣೆಗೆ ರೈಲಿನಲ್ಲಿ ಟಿಕೆಟ್ ಕಲೆಕ್ಟರ್ ಬಂದಿದ್ದಾನೆ. ಈ ವೇಳೆ ಪ್ರಯಾಣಿಕ ಕನ್ನಡ ಮಾತನಾಡಿ ಎಂದು ಆಗ್ರಹಿಸಿದ್ದಾರೆ. ಇದರಿಂದ ರೊಚ್ಚಿಗೆದ್ದ ಟಿಕೆಟ್ ಕಲೆಕ್ಟರ್, ಪ್ರಯಾಣಿಕನ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ತಿಳಿದುಬಂದಿದೆ.
ಕೊಪ್ಪಳ ಮೂಲದ ಪ್ರಯಾಣಿಕ ಮೊಹಮ್ಮದ್ ಭಾಷಾ ಹಲ್ಲೆಗೊಳಗಾದವರು. ಟಿಕೆಟ್ ಕಲೆಕ್ಟರ್‌ಗೆ ಕನ್ನಡ ಮಾತನಾಡು ಎಂದು ಇವರು ಆಗ್ರಹಿಸಿದಾಗ, ಟಿಕೆಟ್ ಕಲೆಕ್ಟರ್ ಕನ್ನಡ ಬರಲ್ಲ ಎಂದಿದ್ದಾನೆ. ಕರ್ನಾಟಕದಲ್ಲಿ ಇದ್ದೀರಿ, ಕನ್ನಡ ಕಲಿಯೋದಕ್ಕೆ ಆಗಲ್ವಾ ಎಂದು ಹೇಳಿದ್ದಕ್ಕೆ ರೊಚ್ಚಿಗೆದ್ದ ಟಿಕೆಟ್ ಕಲೆಕ್ಟರ್, ಮೊಹಮ್ಮದ್ ಭಾಷಾ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ತಿಳಿದು ಬಂದಿದೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಇದಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗುತ್ತಿದೆ.
ಇನ್ನು ಕನ್ನಡದ ನೆಲದಲ್ಲಿ ಕನ್ನಡಿಗನ ಮೇಲೆ ದೌರ್ಜನ್ಯ ಖಂಡಿಸಿ ಕೊಪ್ಪಳ ರೈಲ್ವೆ ನಿಲ್ದಾಣದ ಬಳಿ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸಿ, ದೌರ್ಜನ್ಯವೆಸಗಿದ ಟಿಕೆಟ್ ಕಲೆಕ್ಟರ್ ವಿರುದ್ದ ಧಿಕ್ಕಾರ ಕೂಗಿ ಆಕ್ರೋಶ ಹೊರಹಾಕಿದ್ದಾರೆ. ಪ್ರತಿಭಟನೆಯಲ್ಲಿ ಪ್ರಯಾಣಿಕ ಮಹಮದ್ ಭಾಷಾ ಕೂಡ ಭಾಗಿಯಾಗಿದ್ದರು.
ಪ್ರಯಾಣಿಕನ ಮೇಲೆ ದೌರ್ಜನ್ಯ ಮಾಡಿದ ಟಿಕೆಟ್ ಕಲೆಕ್ಟರ್ ಅಮಾನತು ಮಾಡುವಂತೆ ಹಿರಿಯ ರೈಲ್ವೆ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿದೆ. ರಾಜ್ಯದಲ್ಲಿ ಪದೇ ಪದೇ ಕನ್ನಡಿಗರ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ಕನ್ನಡಿಗರು ಭಯದ ವಾತಾವರಣದಲ್ಲಿದ್ದು, ಕೂಡಲೇ ಕಲೆಕ್ಟರ್ ವಿರುದ್ಧ ಕ್ರಮಕೈಗೊಳ್ಳಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ಮಾಡುವುದಾಗಿ ಕರವೇ ಮುಖಂಡ ಗಿರೀಶಾನಂದ ಎಚ್ಚರಿಕೆ ನೀಡಿದ್ದಾರೆ.