ಗದಗ: ಜಿಲ್ಲೆಯ ಲಕ್ಕುಂಡಿಯಲ್ಲಿ ನಡೆಯುತ್ತಿರುವ ಉತ್ಖನನ ಸ್ಥಳದ ಪಕ್ಕದ ಗೋಡೆಯಲ್ಲಿ ಶಿವಲಿಂಗ ಪತ್ತೆಯಾಗಿದೆ. ಜ.17ರಂದು ಶಿವಲಿಂಗದ ಮಾದರಿಯ ಅವಶೇಷ ಪತ್ತೆಯಾಗಿತ್ತು. ಇಂದು ಜನತಾ ಶಿಕ್ಷಣ ಸಂಸ್ಥೆ ಕಟ್ಟಡ ತೆರವು ಮಾಡಲಾಯಿತು. ಈ ವೇಳೆ ಕೋಟೆಯ ಗೋಡೆಯಲ್ಲಿ ಅಡಗಿದ್ದ ಶಿವಲಿಂಗ ಪತ್ತೆಯಾಗಿದೆ. ಇದು ಹಿತ್ತಳೆಯದ್ದಾ? ಕಂಚಿನದ್ದಾ? ತಾಮ್ರದ್ದಾ? ಅಥವಾ ಬೆಳ್ಳಿಯದ್ದಾ? ಯಾವ ಲೋಹದ್ದು ಎಂಬ ಕುತೂಹಲ ಮೂಡಿದೆ. ಪುರಾತತ್ವ ಇಲಾಖೆ ಅಧಿಕಾರಿಗಳು ಈ ಬಗ್ಗೆ ಸ್ಪಷ್ಟಪಡಿಸಬೇಕಿದೆ.
ವಿಜಯನಗರ ಅರಸರ ಆಳಿಕ್ವೆ ಅಧಿಪತ್ಯದ ನಂತರ ಏಳು ಗ್ರಾಮದ ಜನರು ಲಕ್ಕುಂಡಿಗೆ ಬಂದು ನೆಲೆಸಿದರು. ಇಲ್ಲಿ ನಾಣ್ಯಗಳನ್ನು ತಯಾರಿಸುವ ಟಂಕಸಾಲೆಗಳಿದ್ದವು ಎಂಬ ಇತಿಹಾಸವಿದೆ. ಇತಿಹಾಸಕ್ಕೆ ಸಂಬಂಧಿಸಿದ ಪುರಾತನ ಕಾಲದ ಕಲ್ಲಿನ ವಿಗ್ರಹಗಳು, ಅವಶೇಷಗಳು, ಪುರಾವೆಗಳು ಲಕ್ಕುಂಡಿಯ ಅಲ್ಲಲ್ಲಿ ಸಿಗುತ್ತಿವೆ. ಅಷ್ಟೇ ಅಲ್ಲದೇ ಬೆಳ್ಳಿ, ಬಂಗಾರ, ಮುತ್ತು, ರತ್ನ, ಹವಳಗಳ ತುಣುಕುಗಳು ಅನೇಕ ವರ್ಷಗಳಿಂದ ಸಿಗುತ್ತಲೇ ಇವೆ ಎನ್ನುತ್ತಿದ್ದಾರೆ ಸ್ಥಳೀಯರು.
































