ಪತ್ನಿಯ ಅನಾರೋಗ್ಯದ ವಿಷಯ ಮುಚ್ಚಿಟ್ಟು ಮದುವೆ ಮಾಡಿಕೊಟ್ಟಿದ್ದಾರೆಂಬ ಸೇಡಿಗಾಗಿ ಚರ್ಮರೋಗ ತಜ್ಞೆಯನ್ನು ಆಕೆಯ ವೈದ್ಯ ಪತಿಯೇ ಕೊಂದಿದ್ದ ಪ್ರಕರಣಕ್ಕೆ ಈಗ ಮಹತ್ವದ ತಿರುವು ಸಿಕ್ಕಿದೆ.
ಇದು ಕೇವಲ ಸೇಡಿನ ಕೃತ್ಯವಲ್ಲ, ಬದಲಾಗಿ ಅನೈತಿಕ ಸಂಬಂಧದ ಕರಾಳ ಮುಖವೂ ಇದರ ಹಿಂದಿದೆ ಎಂಬ ಆಘಾತಕಾರಿ ಸತ್ಯ ತನಿಖೆಯಿಂದ ಹೊರಬಿದ್ದಿದೆ. ಆರೋಪಿ ಪತಿ ತನ್ನ ಗೆಳತಿಗೆ ಕಳುಹಿಸಿದ್ದ ಒಂದೇ ಒಂದು ಡಿಜಿಟಲ್ ಸಂದೇಶ, ಇಡೀ ಕೊಲೆಯ ರಹಸ್ಯವನ್ನು ಬಯಲು ಮಾಡಿದೆ.
ತಂತ್ರಜ್ಞಾನವೇ ಮುಳುವಾಯ್ತು!: ಆರೋಪಿ ಡಾ. ಮಹೇಂದ್ರ ರೆಡ್ಡಿ, ತಾನು ಕೆಲಸ ಮಾಡುತ್ತಿದ್ದ ವಿಕ್ಟೋರಿಯಾ ಆಸ್ಪತ್ರೆಯಲ್ಲೇ ಸಹೋದ್ಯೋಗಿಯೊಬ್ಬರ ಜೊತೆ ಆಪ್ತ ಸಂಬಂಧ ಹೊಂದಿದ್ದನು. ಆಕೆಗೆ ನಿರಂತರವಾಗಿ ಸಂದೇಶಗಳನ್ನು ಕಳುಹಿಸಿ ಕಿರುಕುಳ ನೀಡುತ್ತಿದ್ದ. ಇದರಿಂದ ಬೇಸತ್ತ ಆಕೆ, ಮಹೇಂದ್ರನ ನಂಬರನ್ನು ವಾಟ್ಸಾಪ್‌ನಲ್ಲಿ ಬ್ಲಾಕ್ ಮಾಡಿದ್ದಳು.
ಆದರೆ, ತನ್ನ ಚಾಳಿ ಬಿಡದ ಮಹೇಂದ್ರ, ಆಕೆಯನ್ನು ಸಂಪರ್ಕಿಸಲು ಫೋನ್‌ಪೇ ಆ್ಯಪ್ ಬಳಸಿದ್ದ. ಪತ್ನಿ ಕೃತಿಕಾ ರೆಡ್ಡಿಯನ್ನು ಕೊಲೆ ಮಾಡಿದ ದಿನವೇ, ಆತ ತನ್ನ ಗೆಳತಿಗೆ ಫೋನ್‌ಪೇ ಮೂಲಕ, “I HAVE KILLED MY WIFE BECAUSE OF YOU” (ನಿನಗೋಸ್ಕರ ನನ್ನ ಹೆಂಡತಿಯನ್ನು ಕೊಂದಿದ್ದೇನೆ) ಎಂದು ಸಂದೇಶ ಕಳುಹಿಸಿದ್ದಾನೆ.
ಬೇರೆಲ್ಲಾ ಕಡೆ ಸಂದೇಶಗಳನ್ನು ಡಿಲೀಟ್ ಮಾಡಲು ಪ್ರಯತ್ನಿಸಿದ ಆತ, ಫೋನ್‌ಪೇ ಚಾಟ್ ಡಿಲೀಟ್ ಮಾಡಲು ವಿಫಲನಾಗಿದ್ದ. ಇದೇ ಸಣ್ಣ ತಪ್ಪು ಈಗ ಪೊಲೀಸರಿಗೆ ಪ್ರಬಲ ಸಾಕ್ಷಿಯಾಗಿ ಮಾರ್ಪಟ್ಟಿದೆ. ಮೊಬೈಲ್ ಡೇಟಾ ರಿಟ್ರೀವ್ ಮಾಡಿದಾಗ ಈ ಸ್ಫೋಟಕ ಮಾಹಿತಿ ಪೊಲೀಸರ ಕೈ ಸೇರಿದ್ದು, ಪ್ರಕರಣದ ದಿಕ್ಕನ್ನೇ ಬದಲಿಸಿದೆ.
ಪ್ರಕರಣದ ಹಿನ್ನೆಲೆ: ಮೇ 2024ರಲ್ಲಿ ಡಾ. ಮಹೇಂದ್ರ ರೆಡ್ಡಿ ಮತ್ತು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚರ್ಮರೋಗ ತಜ್ಞೆಯಾಗಿದ್ದ ಡಾ. ಕೃತಿಕಾ ರೆಡ್ಡಿ ವಿವಾಹವಾಗಿತ್ತು. ಆದರೆ, ಮದುವೆಯಾದ ಕೇವಲ 11 ತಿಂಗಳಲ್ಲಿ, ಅಂದರೆ ಏಪ್ರಿಲ್ 2025ರಲ್ಲಿ ಕೃತಿಕಾ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದರು.
ಆರಂಭದಲ್ಲಿ ಇದು ಅಸಹಜ ಸಾವು ಎಂದು ಪ್ರಕರಣ ದಾಖಲಿಸಲಾಗಿತ್ತು. ಆದರೆ, ಕೃತಿಕಾ ಪೋಷಕರ ದೂರಿನ ಮೇರೆಗೆ ನಡೆದ ಮರಣೋತ್ತರ ಪರೀಕ್ಷೆಯಲ್ಲಿ, ಇದು ಸಹಜ ಸಾವಲ್ಲ, ವ್ಯವಸ್ಥಿತ ಕೊಲೆ ಎಂಬುದು ದೃಢಪಟ್ಟಿತ್ತು.
ಕೊಲೆ ನಡೆದಿದ್ದು ಹೇಗೆ?: ಕೃತಿಕಾ ದೇಹದ ತೂಕಕ್ಕೆ ಅಗತ್ಯವಿರುವುದಕ್ಕಿಂತ ಹೆಚ್ಚಿನ ಪ್ರಮಾಣದ ಅರವಳಿಕೆ ಮದ್ದನ್ನು ಕಾಲಿಗೆ ಚುಚ್ಚಿ ಮಹೇಂದ್ರ ರೆಡ್ಡಿ ಕೊಲೆ ಮಾಡಿರುವುದು ತನಿಖೆಯಿಂದ ತಿಳಿದುಬಂದಿದೆ. ಪತ್ನಿಯ ಅನಾರೋಗ್ಯದ ವಿಚಾರವನ್ನು ಮುಚ್ಚಿಟ್ಟು ಮದುವೆ ಮಾಡಿದ್ದರಿಂದ ವೈವಾಹಿಕ ಜೀವನದಲ್ಲಿ ಸಂತೋಷವಿರಲಿಲ್ಲ ಎಂದು ಆರೋಪಿ ಆರಂಭದಲ್ಲಿ ಕಾರಣ ನೀಡಿದ್ದ. ಅಲ್ಲದೆ, ಪತ್ನಿಯ ಆಸ್ತಿ ಕೈತಪ್ಪಿ ಹೋಗಬಾರದೆಂಬ ದುರಾಸೆಯೂ ಈ ಕೃತ್ಯದ ಹಿಂದಿತ್ತು ಎನ್ನಲಾಗಿದೆ.
ಕೊಲೆ ಮಾಡಿದ ನಂತರ ಪಾಪಪ್ರಜ್ಞೆಯಿಂದ ಬಳಲಿದ ಆತ, ಮನಃಶಾಂತಿಗಾಗಿ ಸುಮಾರು 15 ದೇವಸ್ಥಾನಗಳಿಗೆ ಭೇಟಿ ನೀಡಿದ್ದಾಗಿಯೂ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ. ಸದ್ಯ, ಪೊಲೀಸರು ಆತನ ಗೆಳತಿಯನ್ನೂ ವಿಚಾರಣೆಗೆ ಒಳಪಡಿಸಿದ್ದು, ಈ ಕೊಲೆಯಲ್ಲಿ ಆಕೆಯ ಪಾತ್ರದ ಬಗ್ಗೆಯೂ ತನಿಖೆ ಮುಂದುವರಿಸಿದ್ದಾರೆ.

































