ಚಂಢೀಗರ್ : ಹರಿಯಾಣದಲ್ಲಿನ ಸೋನಿಪತ್‌ನಲ್ಲಿರುವ ಒಪಿ ಜಿಂದಾಲ್ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಯೊಬ್ಬ ತನ್ನ ಗೆಳತಿಯನ್ನು ಸೂಟ್‌ಕೇಸ್‌ನೊಳಗೆ ಬಚ್ಚಿಟ್ಟು ಬಾಲಕರ ಹಾಸ್ಟೆಲ್‌ಗೆ ಕರೆದೊಯ್ದ ವೇಳೆ ಸಿಕ್ಕಿ ಬಿದ್ದಿರುವಂತಹ ಘಟನೆ ನಡೆದಿದೆ. ಈ ಘಟನೆಯ ವೀಡಿಯೋ ಇದೀಗ ವೈರಲ್ ಆಗಿದೆ.
ಭದ್ರತಾ ಸಿಬ್ಬಂದಿ ನಿಂತಿದ್ದ ಸಮಯದಲ್ಲಿ ಅಲ್ಲೇ ಎದುರುಗಡೆ ಇದ್ದ ಸೂಟ್‌ಕೇಸ್ ಅಲುಗಾಡಿ ತೆರೆದುಕೊಂಡಿದೆ ಎಂದು ಹೇಳಲಾಗಿದೆ. ಗಾಬರಿಗೊಂಡ ಭದ್ರತಾ ಸಿಬ್ಬಂದಿ ಸೂಟ್‌ಕೇಸ್ ತೆರೆದು ನೋಡಿದಾಗ ಅದರ ಒಳಗೆ ಯುವತಿ ಅವಿತುಕೊಂಡಿರುವುದು ಪತ್ತೆಯಾಗಿದೆ.
ಸೂಟ್‌ಕೇಸ್ ಒಳಗಿದ್ದ ಹುಡುಗಿ ಬಗೆಗಿನ ಮಾಹಿತಿ ಇನ್ನೂ ಬಹಿರಂಗವಾಗಿಲ್ಲ. ಆಕೆಯೂ ಒಪಿ ಜಿಂದಾಲ್ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಅಥವಾ ಬೇರೆ ಸಂಸ್ಥೆಯ ವಿದ್ಯಾರ್ಥಿನಿಯೇ ಎಂಬುದು ಖಚಿತವಿಲ್ಲ.
ಸಹ ವಿದ್ಯಾರ್ಥಿನಿಯೊಬ್ಬಳು ಈ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದು, ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ಈಗ ವೈರಲ್ ಆಗಿದೆ. ವೀಡಿಯೋ ಹಂಚಿಕೊಂಡ ಕೆಲವೇ ಗಂಟೆಗಳಲ್ಲಿ 4 ಲಕ್ಷಕ್ಕೂ ಅಧಿಕ ಜನರು ವೀಕ್ಷಿಸಿದ್ದಾರೆ. ಕಾಮೆಂಟ್‌ಗಳ ಸುರಿಮಳೆಯನ್ನು ನೆಟ್ಟಿಗರು ಹರಿಸುವ ಮೂಲಕ ತಮ್ಮ ಕಾಲೇಜು ದಿನಗಳ ಅನುಭವವನ್ನು ಬರೆದುಕೊಂಡು ನೆನಪನ್ನು ಮತ್ತೆ ಮರುಕಳಿಸಿದ್ದಾರೆ.
ಘಟನೆ ವಿಚಾರವಾಗಿ ವಿಶ್ವವಿದ್ಯಾಲಯದ ಪಿಆರ್‌ಓ ಪ್ರತಿಕ್ರಿಯಿಸಿ, ವಿದ್ಯಾರ್ಥಿಗಳು ತಮಾಷೆಗಾಗಿ ಈ ರೀತಿ ಮಾಡಿದ್ದಾರೆ. ನಮ್ಮಲ್ಲಿ ಭದ್ರತಾ ಸಿಬ್ಬಂದಿ ಬಿಗಿಯಾಗಿರುವುದರಿಂದ ವಿದ್ಯಾರ್ಥಿಯನ್ನು ಹಿಡಿಯಲಾಯಿತು. ಅದು ದೊಡ್ಡ ವಿಷಯವಲ್ಲ. ನಮ್ಮ ಭದ್ರತೆ ಯಾವಾಗಲೂ ಕಟ್ಟುನಿಟ್ಟಾಗಿರುತ್ತದೆ. ಈ ಘಟನೆಯ ಬಗ್ಗೆ ಯಾರೂ ಯಾವುದೇ ರೀತಿಯ ದೂರು ದಾಖಲಿಸಿಲ್ಲ ಎಂಬುವುದಾಗಿ ಹೇಳಿಕೆ ನೀಡಿದ್ದಾರೆ.