ಹಾಸನ: ಹೊಳೆನರಸೀಪುರದ ಬಳಿಯಲ್ಲಿ ವಿದ್ಯಾರ್ಥಿಯೋರ್ವ ಚಲಿಸುತ್ತಿದ್ದ ರೈಲಿನಿಂದ ಕಾಲು ಜಾರಿ ಸುಮಾರು 70 ಅಡಿ ಆಳದ ನದಿಗೆ ಬಿದ್ದು, ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಸಂಭವಿಸಿದೆ.
ಕಾಲು ಜಾರಿ ಬಿದ್ದ ವಿದ್ಯಾರ್ಥಿಯನ್ನು ಎಚ್‌ಕೆಎಸ್ ವಿದ್ಯಾಸಂಸ್ಥೆಯ ಪ್ರಥಮ ಪಿಯುಸಿ ಓದುತ್ತಿರುವ ಮಾಜಾಮಿಲ್ (17) ಎನ್ನಲಾಗಿದೆ. ಮಾಜಾಮಿಲ್ ಬುಧವಾರ ರಾತ್ರಿ ಕೆ.ಆರ್. ನಗರದಿಂದ ಹಾಸನಕ್ಕೆ ಎಕ್ಸ್‌ಪ್ರೆಸ್ ರೈಲಿನಲ್ಲಿ ಬರುತ್ತಿದ್ದು, ಈ ಸಂದರ್ಭದಲ್ಲಿ ರೈಲು ಬೋಗಿಯ ಮೆಟ್ಟಿಲ ಮೇಲೆ ಒಂದು ಕಾಲಿಟ್ಟು, ಇನ್ನೊಂದು ಕಾಲನ್ನು ಬೋಗಿಯಿಂದ ಹೊರಗೆ ಹಾಕಿ ನಿಂತಿದ್ದ ವೇಳೆ ಆಯತಪ್ಪಿ 70ರಿಂದ 80 ಅಡಿ ಎತ್ತರದಿಂದ ಹೊಳೆನರಸೀಪುರ ಪಟ್ಟಣದ ಹೇಮಾವತಿ ನದಿಗೆ ಬಿದ್ದಿದ್ದಾನೆ. ನದಿಯಲ್ಲಿ ಕಡಿಮೆ ನೀರು ಹರಿಯುತ್ತಿದ್ದುದರಿಂದ ನೀರಿನ ಮಧ್ಯೆ ಬಂಡೆ ಹಿಡಿದು ಕಿರುಚಿದ್ದು, ಸ್ಥಳೀಯರು ನದಿಗಿಳಿದು ವಿದ್ಯಾರ್ಥಿಯನ್ನು ರಕ್ಷಿಸಿ ಆಸ್ಪತ್ರೆಯಗೆ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.