ನವದೆಹಲಿ : ಉತ್ತರಾಖಂಡದಲ್ಲಿ ಮೇಘಸ್ಫೋಟದಿಂದ ಭಾರಿ ಮಣ್ಣು ಕುಸಿತ ಸಂಭವಿಸಿ ನಾಪತ್ತೆಯಾಗಿದ್ದ ಕೇರಳ ಮೂಲದ 28 ಪ್ರವಾಸಿಗರ ತಂಡ ಈಗ ಸುರಕ್ಷಿತವಾಗಿದೆ ಎಂದು ಕುಟುಂಬ ಸದಸ್ಯರು ಇದೀಗ ತಿಳಿಸಿದ್ದಾರೆ.
ಪ್ರವಾಸಿ ಗುಂಪಿನಲ್ಲಿದ್ದ ಕೊಚ್ಚಿ ಮೂಲದ ದಂಪತಿಯ ಸಂಬಂಧಿಯೊಬ್ಬರು ಇಲ್ಲಿ ಸುದ್ದಿಗಾರರಿಗೆ ತಿಳಿಸಿದ್ದು ಎಲ್ಲಾ 28 ಪ್ರವಾಸಿಗರು ಸುರಕ್ಷಿತವಾಗಿದ್ದಾರೆ ಎಂದು ತಿಳಿಸಿದ್ದಾರೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಂಬಂಧಿ ಅಂಬಿಲಿ ಎನ್ ನಾಯರ್, ರಕ್ಷಣಾ ಮೂಲಗಳಿಂದ ನಮಗೆ ಬಂದ ಇತ್ತೀಚಿನ ಮಾಹಿತಿ ಪ್ರಕಾರ ಅವರು ಸುರಕ್ಷಿತವಾಗಿದೆ. ಆದರೆ ಇನ್ನೂ ಬಸ್ಸಿನಲ್ಲೇ ಸಿಲುಕಿಕೊಂಡಿದ್ದಾರೆ ಮತ್ತು ಎಲ್ಲಿಗೂ ಹೋಗಲು ಸಾಧ್ಯವಾಗುತ್ತಿಲ್ಲ.
ಅವರಲ್ಲಿ ಹೆಚ್ಚಿನವರು 55 ವರ್ಷಕ್ಕಿಂತ ಮೇಲ್ಪಟ್ಟವರು. ಸೇನಾ ಸಿಬ್ಬಂದಿಯೂ ಸಹ ತಮ್ಮ ಬಸ್ ಇರುವ ಸ್ಥಳಕ್ಕೆ ತಲುಪಲು ಸಾಧ್ಯವಾಗುತ್ತಿಲ್ಲ ಎಂದು ತಿಳಿಸಿದ್ದಾರೆ. ಇನ್ನು ಕೇರಳದ ಪ್ರವಾಸಿಗರು ಸುರಕ್ಷಿತರಾಗಿರುವ ವಿಚಾರವನ್ನು ಉತ್ತರಾಖಂಡ್ ನಲ್ಲಿರುವ ಕೇರಳ ಸಮಾಜಂ ಕೂಡ ಖಚಿತಪಡಿಸಿದೆ.