ಮಂಗಳೂರಿನಿಂದ ಬೆಂಗಳೂರಿಗೆ ಸಂಚರಿಸುತ್ತಿದ್ದ ರೈಲಿನಿಂದ ಯುವಕನೋರ್ವ ಬಿದ್ದು 15 ಗಂಟೆಗಳ ಬಳಿಕ ಪತ್ತೆಯಾದ ಘಟನೆ ಸವಣೂರಿನಲ್ಲಿ ನಡೆದಿದೆ.
ಮಾ.25ರಂದು ಉದಯ ಕುಮಾರ್ ಎಂಬುವರು ರೈಲಿನಲ್ಲಿ ಕುಮಟದಿಂದ ಮಂಗಳೂರು ಮಾರ್ಗವಾಗಿ ಬೆಂಗಳೂರಿಗೆ ತೆರಳುತ್ತಿದ್ದರು. ಉದಯ ಕುಮಾರ್ ಅವರು ರಾತ್ರಿ 11 ಗಂಟೆ ವೇಳೆಗೆ ಸವಣೂರು ಸಮೀಪದ ಸುಣ್ಣಾಜೆ ಬಳಿ ರೈಲಿನಿಂದ ಬಿದ್ದಿದ್ದಾರೆ. ಉದಯ ಅವರು ರೈಲಿನಿಂದ ಕೆಳಗೆ ಬಿದ್ದ ಜಾಗವು ಸ್ಪಲ್ಪ ನಿರ್ಜನ ಪ್ರದೇಶವಾಗಿದ್ದು ಇಳಿಜಾರಿನಿಂದ ಕೂಡಿದೆ. ಬಿದ್ದ ಸ್ಥಳದಿಂದ 25 ಅಡಿಗಳಷ್ಟು ಕೆಳಭಾಗಕ್ಕೆ ಉದಯ ಅವರು ಜಾರಿಕೊಂಡು ಹೋಗಿದ್ದರು.
ಇನ್ನು ರಾತ್ರಿ ವೇಳೆ ಉದಯ ಅವರು ರೈಲಿನಿಂದ ಬೀಳುವುದನ್ನು ಸಹ ಪ್ರಯಾಣಿಕರು ಗಮನಿಸಿದ್ದು, ನೆಟ್ಟಣ ತಲುಪಿದ ವೇಳೆ ರೈಲ್ವೇ ಮಾಸ್ಟರ್ ಗೆ ಮಾಹಿತಿ ನೀಡಿದ್ದರು. ಆದರೆ ಯುವಕ ಬಿದ್ದ ಜಾಗ ಯಾವುದು ಎನ್ನುವುದು ಯಾರಿಗೂ ತಿಳಿದಿರಲಿಲ್ಲ. ಹೀಗಾಗಿ ಪತ್ತೆ ಕಾರ್ಯವೂ ಕಷ್ಟಸಾಧ್ಯವಾಗಿತ್ತು.
ಮಾ.26ರಂದು ಸುಣ್ಣಾಜೆ ಬಳಿ ಕೊಳವೆಬಾವಿಯ ಪಂಪ್ ಎಳೆಯಲು ಹೋಗಿದ್ದ ದಿನೇಶ್ ಆಚಾರ್ಯ, ಸಂತೋಷ್ ಅಲೆಕ್ಕಾಡಿ, ಪ್ರತಾಪ್ ಪರಣೆ ಮತ್ತಿತರರಿಗೆ ಮೋರಿ ಸಮೀಪ ವ್ಯಕ್ತಿಯೋರ್ವರು ನರಳುವುದು ಶಬ್ದ ಕೇಳಿಸಿದೆ. ತಕ್ಷಣ ಈ ವಿಚಾರವನ್ನು ಸಾಮಾಜಿಕ ಕಾರ್ಯಕರ್ತ ಸಚಿನ್ ಸವಣೂರು ಅವರ ಗಮನಕ್ಕೆ ತಂದರು. ಅವರು ಸ್ಥಳಕ್ಕೆ ಬಂದು ಯುವಕನನ್ನು ಪತ್ತೆಹಚ್ಚಿ ಆರೈಕೆ ಮಾಡಿ ವಿಚಾರಿಸಿದಾಗ, ಆತ ಕುಮಟದಿಂದ ಬೆಂಗಳೂರಿಗೆ ತೆರಳುತ್ತಿದ್ದ ವಿಷಯ ತಿಳಿಯಿತು.
ನಂತರ ಪೊಲೀಸರ ಸೂಚನೆಯಂತೆ ಯುವಕನನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಯುವಕನ ಮುಖ ಹಾಗೂ ಕಾಲಿಗೆ ತೀವ್ರ ಗಾಯಗಳಾಗಿವೆ.
 
				 
         
         
         
															 
                     
                     
                     
                     
                    


































 
    
    
        