ಮಂಗಳೂರು : ತುಳುನಾಡಿನಲ್ಲಿ ಭಯಭಕ್ತಿಯಿಂದ ದೈವಗಳ ಆರಾಧನೆ ನಡೆಯುತ್ತದೆ. ಕಾಲಕಾಲಕ್ಕೆ ದೈವಗಳು ತಮ್ಮ ಇರುವಿಕೆಯನ್ನು ಜನರಿಗೆ ತೋರಿಸುತ್ತಾ ಕಾರಣಿಕವಾಗಿ ಮೆರೆಯುತ್ತವೆ ಎಂಬ ನಂಬಿಕೆ ಇಲ್ಲಿನ ಜನರಲ್ಲಿ ಆಳವಾಗಿ ನೆಲೆಗೊಂಡಿದೆ. ದೈವಗಳ ಆರಾಧನೆಗೆ 16 ವರ್ಗಗಳಿದ್ದರೂ, ದೈವಚಾಕಿರಿಯನ್ನು ನೆರವೇರಿಸುವ ಹೊಣೆಗಾರಿಕೆ ತುಳುನಾಡಿನ ಮೂರು ಪ್ರಮುಖ ಸಮುದಾಯಗಳಿಗೆ ಮಾತ್ರ ಸೀಮಿತವಾಗಿದೆ. ಈ ಸಮುದಾಯಗಳು ಪೀಳಿಗೆಗಳಿಂದ ಭಯ-ಭಕ್ತಿಯಿಂದ ದೈವಸೇವೆಯನ್ನು ನಿರ್ವಹಿಸುತ್ತಾ ಬಂದಿದ್ದು, ಇಂದಿಗೂ ಆ ಪರಂಪರೆಯನ್ನು ಜೀವಂತವಾಗಿಟ್ಟುಕೊಂಡಿವೆ.
ಆದರೆ ಇತ್ತೀಚಿನ ದಿನಗಳಲ್ಲಿ ದೈವ ನರ್ತನ ಸೇವೆಯನ್ನು ಮುಂದುವರಿಸಲು ಆಸಕ್ತಿ ತೋರುವ ಯುವಕರ ಸಂಖ್ಯೆ ಕಡಿಮೆಯಾಗುತ್ತಿರುವ ಸಂದರ್ಭದಲ್ಲಿ, ಮೂಡಬಿದಿರೆಯ ಮಾರೂರು ಗ್ರಾಮದ ನಾರಾಯಣ–ಪ್ರೇಮ ದಂಪತಿಯ ಪುತ್ರ ಜಗದೀಶ್ ಎಂಬ ಯುವಕ ತನ್ನ ಬದುಕಿನ ಮಹತ್ವದ ನಿರ್ಧಾರದಿಂದ ಗಮನ ಸೆಳೆದಿದ್ದಾರೆ. ಬಾಲ್ಯದಿಂದಲೇ ತಂದೆಯವರೊಂದಿಗೆ ದೈವ ನರ್ತನ ಸೇವೆಯಲ್ಲಿ ಸಹಾಯಕರಾಗಿ ತೊಡಗಿಸಿಕೊಂಡಿದ್ದ ಜಗದೀಶ್, ಈ ಕುಲ ಕಸುಬು ತಮ್ಮ ತಂದೆಯವರಲ್ಲಿಯೇ ಕೊನೆಯಾಗಬಾರದು ಎಂಬ ದೃಢ ಸಂಕಲ್ಪ ಹೊಂದಿದ್ದರು. ಪಿಯುಸಿ ಶಿಕ್ಷಣದ ನಂತರ ಐಟಿಐ ವೃತ್ತಿಪರ ಕೋರ್ಸ್ ಪೂರ್ಣಗೊಳಿಸಿದ ಜಗದೀಶ್, ಬೆಂಗಳೂರಿನ ಖ್ಯಾತ ಕಂಪನಿಯೊಂದರಲ್ಲಿ ಉತ್ತಮ ಉದ್ಯೋಗವನ್ನು ಪಡೆದಿದ್ದರು. ಆದರೆ ದೂರದ ನಗರದಲ್ಲಿನ ಉದ್ಯೋಗದ ಭದ್ರತೆಯನ್ನೂ ತ್ಯಜಿಸಿ, ಕುಟುಂಬದಿಂದ ಬಂದ ದೈವ ನರ್ತನ ಪರಂಪರೆಯನ್ನು ಉಳಿಸಿಕೊಳ್ಳಲು ಅವರು ಊರಿಗೆ ಮರಳಿದರು. ಪ್ರಸ್ತುತ ಅವರು ತಂದೆಯವರೊಂದಿಗೆ ದೈವ ನರ್ತನ ಸೇವೆ ನಿರ್ವಹಿಸುತ್ತಿರುವುದರ ಜೊತೆಗೆ, ಸ್ಥಳೀಯ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗವೂ ಮಾಡುತ್ತಿದ್ದಾರೆ.ಜಗದೀಶ್ ಅವರು ಮಾಯಂದಾಲೆ, ಸತ್ಯದೇವತೆ, ಹಿರಿಯಜ್ಜ, ಬಂಟ, ಕುಕ್ಕಿನಂತ್ತಾಯ, ಮಹಿಷಾಂದಯ ಸೇರಿದಂತೆ ಹಲವು ದೈವಗಳ ನರ್ತನ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ದೈವಗಳ ಸಂಧಿ, ಪಾರ್ದನ ಹಾಗೂ ಆಚರಣೆಗಳ ಸೂಕ್ಷ್ಮತೆಗಳನ್ನು ತಂದೆಯವರಿಂದಲೇ ಕಲಿತು, ಕುಲಪರಂಪರೆಯ ಸೇವೆಯನ್ನು ಸಮರ್ಪಣಾ ಭಾವದಿಂದ ಮುಂದುವರಿಸುತ್ತಿದ್ದಾರೆ.ಆಧುನಿಕ ಜೀವನಶೈಲಿ ಮತ್ತು ಉದ್ಯೋಗದ ಒತ್ತಡಗಳ ನಡುವೆಯೂ, ತುಳುನಾಡಿನ ದೈವಾರಾಧನಾ ಪರಂಪರೆಯನ್ನು ಉಳಿಸಿಕೊಳ್ಳಲು ತೊಡಗಿಸಿಕೊಂಡಿರುವ ಜಗದೀಶ್ ಅವರ ನಿಷ್ಠೆ ಮತ್ತು ಸಮರ್ಪಣೆ ನಿಜಕ್ಕೂ ಶ್ಲಾಘನೀಯವಾಗಿದೆ. ಅವರ ಈ ಪ್ರಯತ್ನವು ಮುಂದಿನ ಪೀಳಿಗೆಗೆ ಪ್ರೇರಣೆಯಾಗಿ ಪರಿಣಮಿಸಲಿದೆ.
































