ಹೈದರಾಬಾದ್ ರೈಲಿನ ಮಹಿಳಾ ಬೋಗಿಯಲ್ಲಿ 25 ವರ್ಷದ ಯುವಕನೊಬ್ಬ 23ರ ಯುವತಿಗೆ ಲೈಂಗಿಕ ಕಿರುಕುಳ ನೀಡಲು ಮುಂದಾಗಿದ್ದು, ಆತ್ಮರಕ್ಷಣೆಗೆ ಯುವತಿ ಚಲಿಸುತ್ತಿದ್ದ ರೈಲಿನಿಂದಲೇ ಹಾರಿರುವ ಘಟನೆ ಸಿಕಂದರಾಬಾದ್ನಲ್ಲಿ ನಡೆದಿದೆ.
ರೈಲ್ವೆ ಪೊಲೀಸರು ಈ ಘಟನೆ ಬಗ್ಗೆ ದೃಢಪಡಿಸಿದ್ದಾರೆ. ಗಾಯಗೊಂಡ ಸಂತ್ರಸ್ತೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆ ವಿವರ: ಮಾರ್ಚ್ 22ರಂದು ಸಂಜೆ ಯುವತಿ ತೆಲಂಗಾಣದ ಮೆಡ್ಚಾಲ್ನಿಂದ ಸಿಕಂದರಾಬಾದ್ಗೆ ಎಂಎಂಟಿಎಸ್ ರೈಲಿನ ಮಹಿಳಾ ಬೋಗಿಯಲ್ಲಿ ಪ್ರಯಾಣಿಸುತ್ತಿದ್ದರು. ಆರಂಭದಲ್ಲಿ ಈ ಯುವತಿ ಸೇರಿದಂತೆ ಬೋಗಿಯಲ್ಲಿ ಇನ್ನಿಬ್ಬರು ಮಹಿಳಾ ಪ್ರಯಾಣಿಕರಿದ್ದರು. ಆದರೆ, ಅವರು ಅಲ್ವಾಲ್ ರೈಲು ನಿಲ್ದಾಣದಲ್ಲಿ ಇಳಿದ ಬಳಿಕ ಯುವತಿ ಬೋಗಿಯಲ್ಲಿ ಒಬ್ಬಂಟಿಯಾಗಿದ್ದರು. ಈ ಸಂದರ್ಭದಲ್ಲಿ ರೈಲು ಹತ್ತಿದ ಯುವಕ ಆಕೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ. ಇದಕ್ಕೆ ಯುವತಿ ತೀವ್ರ ಪ್ರತಿರೋಧ ವ್ಯಕ್ತಪಡಿಸಿದ್ದಾರೆ.
ಯುವಕನ ಕಿರುಕುಳ ಹೆಚ್ಚಾದಂತೆ ಆತಂಕಗೊಂಡ ಯುವತಿ ಚಲಿಸುತ್ತಿದ್ದ ರೈಲಿನಿಂದಲೇ ಹೊರ ಜಿಗಿದಿದ್ದಾರೆ. ಪರಿಣಾಮ ಆಕೆಯ ತಲೆ, ಗದ್ದ ಮತ್ತು ಬಲಗೈ ಮತ್ತು ಸೊಂಟಕ್ಕೆ ಗಾಯವಾಗಿದೆ. ತಲೆಗೆ ಗಂಭೀರ ಸ್ವರೂಪದ ಗಾಯವಾಗಿದ್ದು, ರಕ್ತ ಸೋರುತ್ತಿತ್ತು. ಯುವತಿಯನ್ನು ಗಮನಿಸಿದ ದಾರಿಹೋಕರು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಈ ಕುರಿತು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಯುವತಿಯ ಹೇಳಿಕೆ ಪಡೆದು ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.