ಕೋಲ್ಕತ್ತ: ನಾಲ್ಕು ವರ್ಷಗಳ ಹಿಂದೆ ಕಾಂಗ್ರೆಸ್ ಬಿಟ್ಟು ತೃಣಮೂಲ ಕಾಂಗ್ರೆಸ್ ಸೇರಿದ್ದ ಮಾಜಿ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರ ಪುತ್ರ ಅಭಿಜಿತ್ ಮುಖರ್ಜಿ ಮತ್ತೆ ಕಾಂಗ್ರೆಸ್ ತೆಕ್ಕೆಗೆ ಮರಳಿದ್ದಾರೆ.
ಅಭಿಜಿತ್ ಮುಖರ್ಜಿ ಅವರು ಎಐಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಪಶ್ಚಿಮ ಬಂಗಾಳದ ಉಸ್ತುವಾರಿಯಾಗಿರುವ ಗುಲಾಮ್ ಅಹ್ಮದ್ ಮಿರ್ ಸಮ್ಮುಖದಲ್ಲಿ ಕಾಂಗ್ರೆಸ್‌ಗೆ ಸೇರ್ಪಡೆಯಾಗಿದ್ದಾರೆ.
ಕಳೆದ ವರ್ಷ ಜೂನ್‌ನಲ್ಲಿ ಕಾಂಗ್ರೆಸ್ ಸೇರಬೇಕಿತ್ತು ಆದರೆ ಅದು ವಿವಿಧ ಕಾರಣಗಳಿಂದ ಸಾಧ್ಯವಾಗಿರಲಿಲ್ಲ, ಈಗ ಮಾತೃ ಪಕ್ಷಕ್ಕೆ ಮರಳಿದ್ದು ರಾಜಕೀಯದಲ್ಲಿ ಇದು ನನ್ನ ಎರಡನೇ ಜನ್ಮದಿನವಾಗಿದೆ ಎಂದು ಅಭಿಜಿತ್ ಮುಖರ್ಜಿ ತಿಳಿಸಿದ್ದಾರೆ.
ರಾಜ್ಯ ಘಟಕದ ಅಧ್ಯಕ್ಷ ಶುಭಂಕರ್ ಸರ್ಕಾರ್ ಈ ಕುರಿತು ಮಾತನಾಡಿ ಅಭಿಜಿತ್ ಮುಖರ್ಜಿ ಮರಳಿ ಪಕ್ಷಕ್ಕೆ ಬಂದಿರುವುದು ದೊಡ್ಡ ಹೆಜ್ಜೆಯಾಗಿದೆ. ಬಂಗಾಳದ ಜನರ ಪರವಾಗಿ ಹೋರಾಡಲು ಪಕ್ಷಕ್ಕೆ ಮತ್ತಷ್ಟು ಚೈತನ್ಯ ಸಿಕ್ಕಿದೆ ಎಂದು ತಿಳಿಸಿದ್ದಾರೆ.
2012ರ ಉಪಚುನಾವಣೆ ಹಾಗೂ 2014ರ ಲೋಕಸಭಾ ಚುನಾವಣೆಯಲ್ಲಿ ಜಂಗೀಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅಭಿಜಿತ್ ಮುಖರ್ಜಿ ಅವರು ಗೆಲುವು ಸಾಧಿಸಿದ್ದರು.