ಚಂಡೀಗಢ : ಲುಧಿಯಾನದಿಂದ ದೆಹಲಿಗೆ ತೆರಳುತ್ತಿದ್ದ ಗರೀಬ್ ರಥ ಎಕ್ಸ್ಪ್ರೆಸ್ ರೈಲಿನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಎಸಿ ಕೋಚ್ಗಳು ಹೊತ್ತಿ ಉರಿದ ಘಟನೆ ಪಂಜಾಬ್ನಲ್ಲಿ ನಡೆದಿದೆ.
ಘಟನೆಯ ಸಮಯದಲ್ಲಿ ರೈಲು ಅಮೃತಸರದಿಂದ ಪ್ರಯಾಣಿಸುತ್ತಿತ್ತು. ಘಟನೆಯಲ್ಲಿ ಪ್ರಯಾಣಿಕರಿಗೆ ಯಾವುದೇ ಹಾನಿಯಾಗದಂತೆ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ. ಘಟನೆ ಬಳಿಕ ಭಯದ ವಾತಾವರಣ ಸೃಷ್ಟಿಯಾಗಿದೆ
ಪಂಜಾಬ್ನ ಸಿರ್ಹಿಂದ್ ರೈಲು ನಿಲ್ದಾಣದಲ್ಲಿ ಬೆಳಗ್ಗೆ 7:30ರ ಸುಮಾರಿಗೆ ಅಮೃತಸರ-ಸಹರ್ಸಾ ಗರೀಬ್ ರಥ ಎಕ್ಸ್ಪ್ರೆಸ್ ರೈಲಿನ ಕೋಚ್ಗೆ ಬೆಂಕಿ ಹೊತ್ತಿಕೊಂಡಿದೆ. ರೈಲಿನ 2-3, ಜಿ -19 ಎಸಿ ಕೋಚ್ಗಳಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಪ್ರಯಾಣಿಕರೊಬ್ಬರು ಕೂಡಲೇ ಸರಪಳಿ ಎಳೆದು ರೈಲನ್ನು ನಿಲ್ಲಿಸಿದ್ದಾರೆ. ತಕ್ಷಣ, ಪೈಲಟ್ (ಚಾಲಕ) ಎಲ್ಲಾ ಪ್ರಯಾಣಿಕರನ್ನು ರೈಲಿನಿಂದ ಇಳಿಯುವಂತೆ ಸೂಚನೆ ನೀಡಿದ್ದು, ಘಟನೆ ಬಗ್ಗೆ ರೈಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಕೋಚ್ನಲ್ಲಿದ್ದ ಪ್ರಯಾಣಿಕರನ್ನ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ಸರ್ಕಾರಿ ರೈಲ್ವೆ ಪೊಲೀಸ್ (ಜಿಆರ್ಪಿ) ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಾಹಿತಿ ತಿಳಿದ ತಕ್ಷಣ ರೈಲ್ವೆ ನಿಲ್ದಾಣದ ಅಧಿಕಾರಿಗಳು, ನೌಕರರು, ಜಿಆರ್ಪಿ, ಆರ್ಪಿಎಫ್ ಮತ್ತು ಪೊಲೀಸ್ ತಂಡಗಳು ಸ್ಥಳಕ್ಕೆ ತಲುಪಿದವು. ಅಗ್ನಿಶಾಮಕ ದಳದವರನ್ನೂ ಸಹ ಘಟನಾ ಸ್ಥಳಕ್ಕೆ ತಂದು ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಯಿತು. ಘಟನೆ ವೇಳೆ ರೈಲಿನಿಂದ ಇಳಿಯಲು ಪ್ರಯತ್ನಿಸುತ್ತಿದ್ದ ಕೆಲವು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.