ಬೆಂಗಳೂರು: ಸರ್ಕಾರದಲ್ಲಿ ಸೋರಿಕೆಯಾಗಿದೆ ಎಂದು ಹೇಳಲಾಗುತ್ತಿರುವ ಸಾಮಾಜಿಕ ಆರ್ಥಿಕ ಶೈಕ್ಷಣಿಕ ಸಮೀಕ್ಷೆ (SES) – 2015 ಜಾತಿ ದತ್ತಾಂಶವನ್ನು ನೋಡುವುದಾದರೆ, ಕರ್ನಾಟಕದಲ್ಲಿ ಮುಸಲ್ಮಾನರು ಏಕೈಕ ಅತಿದೊಡ್ಡ ಸಮುದಾಯವಾಗಿದ್ದು, 76,76,247 (12.83%) ಜನಸಂಖ್ಯೆಯನ್ನು ಹೊಂದಿದ್ದಾರೆ.
ವರದಿಯು ಕೆಲವು ಪ್ರಮುಖ ಸಮುದಾಯಗಳ ‘ವಿವಾದಾತ್ಮಕ’ ವಿಭಜನೆಯನ್ನು ಒಳಗೊಂಡಿದೆ. ಇನ್ನೂ ಅಧಿಕೃತವಾಗಿ ದೃಢೀಕರಿಸದ ದತ್ತಾಂಶವು ಮುಸ್ಲಿಮರನ್ನು ಏಕೈಕ ಅತಿದೊಡ್ಡ ಸಮುದಾಯವೆಂದು ತೋರಿಸಿದೆ. ಸಂಯೋಜಿಸಲಾದ ದತ್ತಾಂಶವು ಪರಿಶಿಷ್ಟ ಜಾತಿಗಳನ್ನು ಏಕೈಕ ಅತಿದೊಡ್ಡ ಸಮುದಾಯವೆಂದು ತೋರಿಸಿದೆ.
ಏಪ್ರಿಲ್ 17 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆದಿರುವ ವಿಶೇಷ ಸಚಿವ ಸಂಪುಟ ಸಭೆಯ ನಂತರ ವರದಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಲಾಗುತ್ತಿದ್ದು, ಅದಕ್ಕೂ ಮುನ್ನ ವರದಿ ಸೋರಿಕೆಯಾಗಿದೆ. ಕಾಂಗ್ರೆಸ್ ಶಾಸಕರೊಬ್ಬರು ಸೋರಿಕೆಯಾದ ದತ್ತಾಂಶವನ್ನು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ(New Indian Express) ಪ್ರತಿನಿಧಿಯೊಂದಿಗೆ ಹಂಚಿಕೊಂಡಿದ್ದಾರೆ.
ವಿವಿಧ ಸಮುದಾಯಗಳ ಜನರು ಸಮೀಕ್ಷೆಯ ಸಮಯದಲ್ಲಿ ಆಯಾ ಜಾತಿಗಳಿಗೆ ನೀಡಲಾದ ಕೋಡ್‌ನೊಂದಿಗೆ ತಮ್ಮ ಉಪ-ಜಾತಿಗಳನ್ನು ನೋಂದಾಯಿಸಲು ಬಯಸಿದ್ದರಿಂದ ಮೂಲ ದತ್ತಾಂಶವನ್ನು ವಿಭಜಿಸಬೇಕಾಯಿತು ಎಂದು ಮೂಲಗಳು TNIE ಗೆ ಮಾಹಿತಿ ನೀಡಿ ವಿಭಜನೆಯನ್ನು ಸಮರ್ಥಿಸಿಕೊಂಡಿವೆ.
ಒಕ್ಕಲಿಗರು, ಲಿಂಗಾಯತರು, ವೀರಶೈವರು, ಹಿಂದುಳಿದ ಈಡಿಗರು, ಬಿಲ್ಲವರು, ಎಸ್‌ಸಿ ಎಡ ಮತ್ತು ಬಲ, ಭೋವಿ, ಲಂಬಾಣಿ, ಎಸ್‌ಟಿ ವಾಲ್ಮೀಕಿ ನಾಯಕರು ಮತ್ತು ಪರಿಶಿಷ್ಟ ಜನಾಂಗದ ಇತರ ಜನಸಂಖ್ಯೆಯನ್ನು ಉಪಪಂಗಡಗಳು ಮತ್ತು ಜಾತಿಗಳ ಪ್ರಕಾರ ವಿಂಗಡಿಸಲಾಗಿದೆ ಎಂದು ಮಾನವಶಾಸ್ತ್ರಜ್ಞ ಮತ್ತು ಕಾಂಗ್ರೆಸ್ ಬೆಂಬಲಿಗರೊಬ್ಬರು ಹೇಳುತ್ತಾರೆ.
ಹಳೆಯ ಮೈಸೂರು ಭಾಗದಲ್ಲಿ ಪ್ರಧಾನವಾಗಿರುವ ಒಕ್ಕಲಿಗ ಸಮುದಾಯವು ಜನಸಂಖ್ಯಾ ಪಟ್ಟಿಯಲ್ಲಿ 50,65,642 (8.47%) ದೊಂದಿಗೆ ಎರಡನೇ ಸ್ಥಾನದಲ್ಲಿದೆ, ಕುರುಬರು 44,11,758 (7.38%), ಎಸ್‌ಸಿ ಎಡ 35,99,895 (6.02%), ಎಸ್‌ಸಿ ಬಲ 34,98,188 (5.85%) ಮತ್ತು ಎಸ್‌ಟಿ ವಾಲ್ಮೀಕಿ-ನಾಯಕ 30,31,656 (5.07%) ದೊಂದಿಗೆ ನಂತರದ ಸ್ಥಾನದಲ್ಲಿದೆ. ರಾಜ್ಯದ ಪ್ರಬಲ ಲಿಂಗಾಯತ ಸಮುದಾಯ 30,14,696 (5.04%), ನಂತರ SC (ಇತರರು) 19,82,011 (3.31%) ಮತ್ತು ವೀರಶೈವ-ಲಿಂಗಾಯತರು 17,88,279 (2.99%) ಇದ್ದಾರೆ.