ಬೆಂಗಳೂರು : ಜಾಮೀನು ಬಾಂಡ್ಗೆ ಸಹಿ ಹಾಕಲು ನಟ ದರ್ಶನ್ ಆಸ್ಪತ್ರೆಯಿಂದ ತೆರಳಿದ್ದಾರೆ. ಈ ಕಾರಣದಿಂದ ಆಸ್ಪತ್ರೆಯಿಂದ ನಟ ಡಿಸ್ಚಾರ್ಜ್ ಎಂಬ ವದಂತಿ ಹರಡಿತ್ತು. ಇದು ಚರ್ಚೆಗೆ ಕಾರಣವಾಗಿತ್ತು. ನಟ ದರ್ಶನ್ ಜಾಮೀನು ಸಿಗುತ್ತಿದ್ದಂತೆ ಸಂಪೂರ್ಣವಾಗಿ ಗುಣಮುಖರಾದಂತೆ ಕಾಣಿಸುತ್ತಿದೆ. ಅವರು ವೈದ್ಯರ ಸಲಹೆ ಪಡೆದು ಆಸ್ಪತ್ರೆಯಿಂದ ಹೊರ ಬಂದಿದ್ದಾರೆ. ಬೆನ್ನು ನೋವಿನ ಕಾರಣ ನಿಡಿ ಮಧ್ಯಂತರ ಜಾಮೀನು ಪಡೆದಿದ್ದರು. ಕಳೆದ ಒಂದೂವರೆ ತಿಂಗಳಿಂದ ಅವರು ಆಸ್ಪತ್ರೆಯಲ್ಲಿಯೇ ಇದ್ದರು. ಜಾಮೀನು ಸಿಗುತ್ತಿದ್ದಂತೆ ನಟ ದರ್ಶನ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಎಂಬ ವದಂತಿ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ದರ್ಶನ್ಗೆ ಶಸ್ತ್ರಚಿಕಿತ್ಸೆ ಮಾಡಿಸದೇ ಇದ್ದರೆ ಪಾರ್ಶ್ವವಾಯು ಆಗುತ್ತದೆ ಎಂಬುವುದಾಗಿ ವೈದ್ಯರು ವರದಿ ನೀಡಿದ್ದರು. ಇದೇ ವರದಿ ನೀಡಿ ದರ್ಶನ್ ಅವರು ಮಧ್ಯಂತರ ಜಾಮೀನು ಪಡೆದು ಆಸ್ಪತ್ರೆ ಸೇರಿದ್ದರು. ಒಂದೂವರೆ ತಿಂಗಳು ಕಳೆದರೂ ದರ್ಶನ್ ಯಾವುದೇ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿಲ್ಲ. ‘ಬಿಪಿ ಕಾರಣಕ್ಕೆ ಶಸ್ತ್ರಚಿಕಿತ್ಸೆ ಆಗಿಲ್ಲ’ ಎಂದು ದರ್ಶನ್ ಪರ ವಕೀಲರು ಹೇಳಿದ್ದರು. ಈಗ ದರ್ಶನ್ ಅವರು ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳದೆ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.
ಬೆಂಗಳೂರಿನ ಕೆಂಗೇರಿಯಲ್ಲಿರುವ ಬಿಜಿಎಸ್ ಆಸ್ಪತ್ರೆಗೆ ಇಂದು ಮಧ್ಯಾಹ್ನ ಪತ್ನಿ ವಿಜಯಲಕ್ಷ್ಮೀ ಹಾಗೂ ಆಪ್ತ ಧನ್ವಿರ್ ಬಂದಿದ್ದು, ಆ ಬಳಿಕ ದರ್ಶನ್ ಡಿಸ್ಚಾರ್ಜ್ ಆಗಿ ಕಾರನ್ನು ಏರಿ ನೇರವಾಗಿ ಹೊಸಕೆರೆಹಳ್ಳಿಯಲ್ಲಿರುವ ಪತ್ನಿ ವಿಜಯಲಕ್ಷ್ಮೀ ಮನೆಗೆ ತೆರಳಿದ್ದಾರೆ ಎಂದು ಹೇಳಲಾಗಿದೆ. ಸದ್ಯ ಜಾಮೀನು ಸಿಗುತ್ತಿದ್ದಂತೆ ನಟ ದರ್ಶನ್ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ ಎಂಬ ವದಂತಿ ಹರಡಿತ್ತು. ಇದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.