ಮಂಗಳೂರು: ಕ್ಯಾಬ್ ಚಾಲಕನಿಗೆ ಕರೆ ಮಾಡಿ ‘ಮುಸ್ಲಿಂ ಟೆರರಿಸ್ಟ್’ ಎಂದು ಅವಹೇಳನ ಮಾಡಿದ ಬಗ್ಗೆ ಮಲಯಾಳಂ ಚಿತ್ರರಂಗದ ಜನಪ್ರಿಯ ಪೋಷಕ ನಟ ಜಯಕೃಷ್ಣನ್ ಮತ್ತು ಅವರ ಗೆಳೆಯರಾದ ಸಂತೋಷ್ ಅಬ್ರಾಹಂ ಹಾಗೂ ವಿಮಲ್ ಎಂಬವರ ವಿರುದ್ಧ ಮಂಗಳೂರಿನ ಉರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರಿಗೆ ಗುರುವಾರ ರಾತ್ರಿ ಬಂದಿದ್ದ ಜಯಕೃಷ್ಣ್ ಮತ್ತು ಸ್ನೇಹಿತರು ಉಬರ್ ಮತ್ತು ರಾಪಿಡೊ ಕ್ಯಾಪ್ಟನ್ ಆ್ಯಪ್ ಮೂಲಕ ಕ್ಯಾಬ್ ಬುಕ್ ಮಾಡಿದ್ದರು. ವಾಹನ ಹತ್ತುವ ಸ್ಥಳವನ್ನು ಬಿಜೈ ನ್ಯೂ ರೋಡ್ ಎಂದು ನಮೂದಿಸಿದ್ದರು. ನಾನು ಆ್ಯಪ್ ಮೂಲಕ ಕಾಲ್ ಮಾಡಿ ಪಿಕ್ ಆಪ್ ಬಗ್ಗೆ ವಿಚಾರಿಸಿದ್ದೆ. ಆಗ ಹಿಂದಿ ಭಾಷೆಯಲ್ಲಿ ಮಾತನಾಡಿದ ವ್ಯಕ್ತಿಯು ನನಗೆ ‘ಮುಸ್ಲಿಂ ಉಗ್ರವಾದಿ, ಟೆರರಿಸ್ಟ್’ ಎಂದು ಅಪಹಾಸ್ಯವಾಗಿ ಮಾತನಾಡಿದ್ದ. ಅಲ್ಲದೆ ಹಿಂದಿ ಹಾಗೂ ಮಲಯಾಳ ಭಾಷೆಯಲ್ಲಿ ನನ್ನ ತಾಯಿಗೆ ಅವಾಚ್ಯವಾಗಿ ಬೈದಿದ್ದರು ಎಂದು ಕ್ಯಾಬ್ ಚಾಲಕ ಅಹ್ಮದ್ ಶಫೀಕ್ ದೂರು ನೀಡಿದ್ದುಮ ಈ ದೂರಿನನ್ವಯ ಉರವ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದೆ.
ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 352 (ಸಾರ್ವಜನಿಕ ಶಾಂತಿ ಭಂಗಪಡಿಸುವ ಅಥವಾ ಅಪರಾಧ ಕೃತ್ಯಕ್ಕೆ ಪ್ರಚೋದಿಸಲು ಉದ್ದೇಶಪೂರ್ವಕವಾಗಿ ಅವಮಾನಿಸುವುದು) ಹಾಗೂ 353(2) (ಧರ್ಮ, ಜನಾಂಗ ಅಥವಾ ಜಾತಿ ಆಧಾರದ ಮೇಲೆ ಸುಳ್ಳು ಮಾಹಿತಿ, ವದಂತಿ ಅಥವಾ ಆತಂಕಕಾರಿ ಸುದ್ದಿ ಹರಡುವುದು) ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.