ಬಾಲಿವುಡ್ನ ಖ್ಯಾತ ನಟ ಗೋವಿಂದ್ ಸಂಸಾರದ ಬಗ್ಗೆ ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಗೋವಿಂದ ಹಾಗೂ ಪತ್ನಿ ಸುನೀತಾ ಅಹುಜಾ ನಡುವೆ ಬಿರುಕು ಮೂಡಿದ್ದು ಹೀಗಾಗಿ ೩೭ ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಲು ಸೆಲೆಬ್ರಿಟಿ ಜೋಡಿ ಮುಂದಾಗಿದ್ದಾರೆ ಎನ್ನಲಾಗುತ್ತಿದೆ. ಆದರೆ ದಂಪತಿ ಕಡೆಯಿಂದ ಈ ಬಗ್ಗೆ ಅಧಿಕೃತ ಹೇಳಿಕೆ ಹೊರಬಿದ್ದಿಲ್ಲ.
ಸುನೀತಾ ಮತ್ತು ಗೋವಿಂದ ಅವರ ಜೀವನ ಶೈಲಿ ನಡುವೆ ಸಾಕಷ್ಟು ವ್ಯತ್ಯಾಸ ಉಂಟಾಗಿದೆ ಎನ್ನಲಾಗಿದೆ. ಹಾಗಾಗಿ ಒಂದಷ್ಟು ಸಮಯದಿಂದ ಅವರು ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದಾರೆ ಎಂಬ ಸುದ್ದಿ ಕೇಳಿಬಂದಿದೆ. ಈ ನಡುವೆ ಇನ್ನೊಂದು ಗಾಸಿಪ್ ಕೂಡ ಹಬ್ಬಿದೆ. ಗೋವಿಂದ ಅವರು ಮರಾಠಿ ನಟಿಯೊಬ್ಬರ ಜೊತೆ ಆತ್ಮೀಯತೆ ಬೆಳೆಸಿಕೊಂಡಿದ್ದು ಇದೇ ಕಾರಣಕ್ಕೆ ಇಬ್ಬರು ದೂರ ದೂರವಾಗುತ್ತಿದ್ದಾರೆ ಎನ್ನಲಾಗುತ್ತಿದೆ.
ಸುನೀತಾ ಅಹುಜಾ ಅವರು ಇತ್ತೀಚೆಗೆ ಮಾಧ್ಯಮವೊಂದರ ಮುಂದೆ, ಗೋವಿಂದ ಅವರು ಸಭೆಗಳು ಮತ್ತು ಔತಣಕೂಟಗಳ ನಂತರ ತಡವಾಗುವುದರಿಂದ ಹೆಚ್ಚಾಗಿ ಪ್ರತ್ಯೇಕವಾಗಿ ವಾಸಿಸುತ್ತಾರೆ ಎಂದು ಹೇಳಿಕೊಂಡಿದ್ದರು. ನಮಗೆ ಎರಡು ಮನೆಗಳಿವೆ, ನಮ್ಮ ಅಪಾರ್ಟ್ಮೆಂಟ್ ಎದುರು ನಮಗೆ ಬಂಗಲೆ ಇದೆ. ನಾನು ಮಕ್ಕಳು ಫ್ಲಾಟ್ನಲ್ಲಿ ವಾಸಿಸುತ್ತೇವೆ ಎಂದಿದ್ದರು.
‘ಮುಂದಿನ ಜನ್ಮದಲ್ಲಿ ಅವರು ನನ್ನ ಗಂಡ ಆಗಬಾರದು. ಅವರಿಗೆ ಹೊರಗೆ ಹೋಗುವುದು ಎಂದರೆ ಇಷ್ಟ ಇಲ್ಲ. ನಾನು ಸುತ್ತಾಡಲು ಬಯಸುತ್ತೇನೆ. ಅವರು ಯಾವಾಗಲೂ ಕೆಲಸದಲ್ಲಿ ಮುಳುಗಿರುತ್ತಾರೆ. ನಾವಿಬ್ಬರು ಜೊತೆಯಾಗಿ ಸಿನಿಮಾಗೆ ಹೋಗಿದ್ದೇ ನನಗೆ ನೆನಪಿಲ್ಲ’ ಎಂದು ಸುನೀತಾ ಅವರು ಈ ಮೊದಲಿನ ಸಂದರ್ಶನವೊಂದರಲ್ಲಿ ಹೇಳಿದ್ದರು.
ಗೋವಿಂದ ಅವರ ವ್ಯವಸ್ಥಾಪಕ ಶಶಿ ಸಿನ್ಹಾ ಪ್ರತಿಕ್ರಿಯಿಸಿ, ಕುಟುಂಬದ ಕೆಲವು ಸದಸ್ಯರು ನೀಡಿದ ಕೆಲವು ಹೇಳಿಕೆಗಳಿಂದಾಗಿ ದಂಪತಿಗಳ ನಡುವೆ ಸಮಸ್ಯೆಗಳಿವೆ. ಅಂತಹ ಸಮಸ್ಯೆ ಇಲ್ಲ ಮತ್ತು ಗೋವಿಂದ ಹೊಸ ಚಿತ್ರವನ್ನು ಪ್ರಾರಂಭಿಸುವ ಪ್ರಕ್ರಿಯೆಯಲ್ಲಿದ್ದಾರೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ಗೋವಿಂದ ಮತ್ತು ಸುನೀತಾ ಅಹುಜಾ ಮಾರ್ಚ್ 1987 ರಲ್ಲಿ ಮದುವೆಯಾಗಿದ್ದರು.