ಬೆಂಗಳೂರು:ಅಕ್ರಮ ಚಿನ್ನ ಸಾಗಾಣಿಕೆ ಮಾಡಿದ ಆರೋಪ ಮೇಲೆ ನಟಿ ರನ್ಯಾ ರಾವ್ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
ಸದ್ಯ ತನಿಖೆ ಪ್ರಗತಿಯಲ್ಲಿದ್ದು ಅನೇಕ ರಹಸ್ಯಗಳು ಈಗ ಬಯಲಾಗುತ್ತಿವೆ. ಕನ್ನಡದ ‘ಮಾಣಿಕ್ಯ’, ‘ಪಟಾಕಿ’ ಸಿನಿಮಾಗಳಲ್ಲಿ ರನ್ಯಾ ರಾವ್ ನಟಿಸಿದ್ದಾರೆ. ಆ ಬಳಿಕ ಅವರು ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿರಲಿಲ್ಲ. 4 ತಿಂಗಳ ಹಿಂದೆಯೇ ರನ್ಯಾ ರಾವ್ ಅವರ ಮದುವೆ ಆಗಿತ್ತು ಎಂಬುದು ಈಗ ತಿಳಿದುಬಂದಿದೆ.
ಈ ಬಗ್ಗೆ ರನ್ಯಾ ರಾವ್ ಮಲತಂದೆ ಡಿಜಿಪಿ ಕೆ. ರಾಮಚಂದ್ರ ರಾವ್ ಅವರು ಪ್ರತಿಕ್ರಿಯೆ ನೀಡಿದ್ದು, ಮದುವೆ ನಂತರ ತಮ್ಮನ್ನು ರನ್ಯಾ ಸಂಪರ್ಕಿಸಿಲ್ಲ ಎಂದು ರಾಮಚಂದ್ರ ರಾವ್ ಹೇಳಿದ್ದಾರೆ ಎಂದು ವರದಿ ಆಗಿದೆ. ಇನ್ನು ರನ್ಯಾ ಅವರು ಪದೇಪದೇ ಗಲ್ಫ್ ರಾಷ್ಟ್ರಗಳಿಗೆ ಭೇಟಿ ನೀಡುತ್ತಿದ್ದರು. ಹಾಗಾಗಿ ಡಿಆರ್ಐ ಅಧಿಕಾರಿಗಳಿಗೆ ರನ್ಯಾ ಮೇಲೆ ಅನುಮಾನ ಮೂಡಿತ್ತು.
ಪ್ರತಿ ಬಾರಿಯೂ ಅವರು ಹಿರಿಯ ಅಧಿಕಾರಿಗಳ ಸೆಕ್ಯೂರಿಟಿ ಪ್ರೋಟೋಕಾಲ್ ಬಳಸಿ ಭದ್ರತಾ ತಪಾಸಣೆಯಿಂದ ತಪ್ಪಿಸಿಕೊಳ್ಳುತ್ತಿದ್ದರು ಎನ್ನಲಾಗಿದೆ. 2025ರಲ್ಲಿ ಅವರು ಸುಮಾರು 10 ಬಾರಿ ಗಲ್ಫ್ ರಾಷ್ಟ್ರಗಳಿಗೆ ಹೋಗಿಬಂದಿದ್ದಾರೆ. 15 ದಿನಗಳಲ್ಲಿ 4 ಸಲ ಅವರು ದುಬೈಗೆ ಹೋಗಿ ಬಂದಿದ್ದಾರೆ. ಈ ಬಾರಿ ಸಿಕ್ಕಿಬಿದ್ದಿದ್ದಾರೆ. ಪ್ರತಿ ಬಾರಿ ದುಬೈಗೆ ತೆರಳಿದ್ದಾಗಲೂ ಅವರು ಒಂದೇ ಡ್ರೆಸ್ ಧರಿಸಿದ್ದರು ಎನ್ನಲಾಗಿದೆ.