ಹರಿಹರ: ಮನುಷ್ಯ ಪ್ರಕೃತಿಯ ಭಾಗ. ಪ್ರಕೃತಿ ಸಹಜ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಮೂಲಕ ಆರೋಗ್ಯವಂತ ಜೀವನ ಸಾಗಿಸಬಹುದು ಎಂದು ರಾಮಕೃಷ್ಣ- ವಿವೇಕಾನಂದ ಆಶ್ರಮದ ಅಧ್ಯಕ್ಷ ಶ್ರೀ ಆತ್ಮದೀಪಾನಂದ ಸ್ವಾಮೀಜಿ ಅಭಿಪ್ರಾಯಪಟ್ಟರು.
ಜನನಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಹಾಗೂ ಸಂಶೋಧನಾ ಕೇಂದ್ರದ ವತಿಯಿಂದ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್, ಶ್ರೀ ರಾಘವೇಂದ್ರ ಬೃಂದಾವನ ಟ್ರಸ್ಟ್, ಧನ್ವಂತರಿ ಪತಂಜಲಿ ಯೋಗ ಆರೋಗ್ಯ ಕೇಂದ್ರಗಳ ಸಂಯುಕ್ತ ಆಶ್ರಯದಲ್ಲಿ ಭಾನುವಾರ ನಗರದ ರಾಘವೇಂದ್ರ ಮಠದ ಆವರಣದಲ್ಲಿ ಆಯೋಜಿಸಿದ್ದ ಉಚಿತ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಶಿಬಿರ ಉದ್ಘಾಟಿಸಿ ಪರಮಪೂಜ್ಯರು ಆಶೀರ್ವಚನ ನೀಡಿದರು.
ಭಾರತದ ಸನಾತನ ಋಷಿಪರಂಪರೆ ನಮಗೆ ಯೋಗ, ಪ್ರಾಣಾಯಾಮದಂಥ ಅಪೂರ್ವ ವಿದ್ಯೆಯನ್ನು ಬಳುವಳಿಯಾಗಿ ನೀಡಿದೆ. ಔಷಧ ರಹಿತವಾಗಿ, ಸನಾತನ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಮೂಲಕ ನಮಗೆ ರೋಗಗಳು ಬರದಂತೆ ಹಾಗೂ ಬಂದ ರೋಗಗಳನ್ನು ಗುಣಪಡಿಸಲು ಕೂಡಾ ಪ್ರಕೃತಿ ಚಿಕಿತ್ಸೆಯಲ್ಲಿ ಅವಕಾಶವಿದೆ. ಪಾಶ್ಚಾತ್ಯ ಶೈಲಿಯ ಅಂಧಾನುಕರಣೆಯನ್ನು ತೊರೆದು ನಮ್ಮ ಸಹಜ, ಸುಂದರ ಜೀವನಶೈಲಿಯಲ್ಲಿ ಅಳವಡಿಸಿಕೊಳ್ಳಿ ಎಂದು ಪೂಜ್ಯರು ಕಿವಿಮಾತು ಹೇಳಿದರು.
ಶಿಬಿರ ಉದ್ಘಾಟಿಸಿದ ಶಾಸಕ ಬಿ.ಪಿ.ಹರೀಶ್ ಮಾತನಾಡಿ, ನಮ್ಮ ಪಾರಂರಪರಿಕ ಯೋಗ ಮತ್ತು ಜೀವನ ಪದ್ಧತಿ ಇಂದು ವಿಶ್ವಾದ್ಯಂತ ಜನಪ್ರಿಯವಾಗುತ್ತಿದೆ. ಔಷಧ ರಹಿತ ಚಿಕಿತ್ಸಾ ಪದ್ಧತಿ ಬಗ್ಗೆ ಜನರಲ್ಲಿ ಹೆಚ್ಚು ಹೆಚ್ಚು ಜಾಗೃತಿ ಮೂಡಿದಲ್ಲಿ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಯೋಗ ನಮ್ಮ ಜೀವನಕ್ರಮವಾಗಬೇಕು. ಆಗ ಯಾವುದೇ ರೋಗ ನಮ್ಮನ್ನು ಬಾಧಿಸುವುದಿಲ್ಲ. ಇದರ ಜತೆಗೆ ನಮ್ಮ ಆಚಾರ- ವಿಚಾರ, ಆಹಾರ-ವಿಹಾರ, ಜೀವನಶೈಲಿಯಲ್ಲಿ ಶಿಸ್ತು ಅಳವಡಿಸಿಕೊಳ್ಳುವ ಮೂಲಕ ರೋಗ ಬಾರದಂತೆ ತಡೆಯಬಹುದು ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜನನಿ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ.ರಾಜೇಶ್ ಪಾದೇಕಲ್ ಅವರು, “ಯೋಗದಿಂದ ರೋಗ ದೂರವಾಗುತ್ತದೆ; ಅಂತೆಯೇ ನಮ್ಮ ಆರೋಗ್ಯ ಕಾಪಾಡಿಕೊಳ್ಳಲು ಪ್ರಕೃತಿ ನಮಗೆ ನೀಡಿದ ಅನೇಕ ಅಂಶಗಳನ್ನು ನಾವಿಂದು ಮರೆತಿದ್ದೇವೆ. ಔಷಧ ರಹಿತವಾಗಿ ನಮ್ಮ ಜೀವನಶೈಲಿ ಮಾರ್ಪಡಿಸಿಕೊಳ್ಳುವ ಮೂಲಕ ಮರೆತ ಅಂಶಗಳನ್ನು ನಮಗೆ ಪ್ರಕೃತಿ ಚಿಕಿತ್ಸಾ ಪದ್ಧತಿ ನೆನಪಿಸುತ್ತಿದೆ. ಈ ಬಗ್ಗೆ ಸಮಾಜದಲ್ಲಿ ಹೆಚ್ಚಿನ ಜಾಗೃತಿ ಮೂಡಿದಾಗ ಮಾತ್ರ ಆರೋಗ್ಯವಂತ ಸಮಾಜ ನಿರ್ಮಾಣ ಸಾಧ್ಯ” ಎಂದು ಅಭಿಪ್ರಾಯಪಟ್ಟರು.
ಹರಿಹರ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್ ಅಧ್ಯಕ್ಷ ಶಂಕರ ಖಟಾವ್‍ಕರ್ ಮಾತನಾಡಿ, ಆರೋಗ್ಯಸೇವೆ ದುಬಾರಿಯಾಗುತ್ತಿರುವ ಹಿನ್ನೆಲೆಯಲ್ಲಿ ಮತ್ತು ನಮಗೆ ತಕ್ಷಣಕ್ಕೆ ಶಮನ ನೀಡುವ ಅಲೋಪತಿ ವೈದ್ಯಪದ್ಧತಿಯ ಅಡ್ಡ ಪರಿಣಾಮಗಳ ಹಿನ್ನೆಲೆಯಲ್ಲಿ ಜನ ಇಂದು ಕೈಗೆಟುಕುವ ಮತ್ತು ಸಹಜ ಚಿಕಿತ್ಸಾ ವಿಧಾನವಾದ ಪ್ರಕೃತಿ ಚಿಕಿತ್ಸೆಯತ್ತ ವಾಲುತ್ತಿದ್ದಾರೆ. ಮಧ್ಯ ಕರ್ನಾಟಕದಲ್ಲೇ ಅತ್ಯುತ್ತಮ ಪ್ರಕೃತಿ ಸೌಲಭವನ್ನು ಇದೀಗ ಜನನಿ ಆಸ್ಪತ್ರೆ ಕಲ್ಪಿಸಿಕೊಟ್ಟಿದ್ದು, ಈ ಭಾಗದ ಜನತೆ ಇದರ ಪ್ರಯೋಜನ ಪಡೆಯಬೇಕು ಎಂದು ಮನವಿ ಮಾಡಿದರು.
ಜನನಿ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕ ಮತ್ತು ಮಾಧ್ಯಮ ಮುಖ್ಯಸ್ಥ ಉದಯಶಂಕರ ಭಟ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ವೀರೇಶ ಹನಗವಾಡಿ, ಚೇಂಬರ್ ಆಫ್ ಕಾಮರ್ಸ್ ಕಾರ್ಯದರ್ಶಿ ಹನಗವಾಡಿ ಬಸವರಾಜಪ್ಪ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ನಂದಿನಿ ಶೇಟ್, ರಾಘವೇಂದ್ರ ಬೃಂದಾವನ ಟ್ರಸ್ಟ್ ಕಾರ್ಯದರ್ಶಿ ಎಚ್.ಎಸ್.ಶ್ರೀಧರಮೂರ್ತಿ, ಧನ್ವಂತರಿ ಪತಂಜಲಿ ಯೋಗ ಆರೋಗ್ಯ ಕೇಂದ್ರದ ಮುಖ್ಯಸ್ಥ ನಿರಂಜನ್, ಯೋಗ ಪ್ರಾಧ್ಯಾಪಕ ಜಯರಾಂ ಮತ್ತಿತರರು ಉಪಸ್ಥಿತರಿದ್ದರು. ಯೋಗಸಾಧಕ ಪುಟಾಣಿಗಳಿಂದ ಆಕರ್ಷಕ ಯೋಗ ನೃತ್ಯ ನೆರವೇರಿತು.
































