ಡಮಾಸ್ಕಸ್: ಸಿರಿಯಾದಲ್ಲಿ ನಡೆದ ವೈಮಾನಿಕ ದಾಳಿಯಲ್ಲಿ ಅಲ್-ಖೈದಾ ಅಂಗಸಂಸ್ಥೆಯ ಸದಸ್ಯನನ್ನು ಕೊಂದಿರುವುದಾಗಿ ಅಮೆರಿಕ ಸೇನೆ ಭಾನುವಾರ ತಿಳಿಸಿದೆ . ವಾಯುವ್ಯ ಸಿರಿಯಾದಲ್ಲಿ ಅಲ್-ಖೈದಾ ಅಂಗಸಂಸ್ಥೆಯಾದ ಭಯೋತ್ಪಾದಕ ಸಂಘಟನೆ ಹುರ್ರಾಸ್ ಅಲ್-ದಿನ್ (ಎಚ್‌ಎಡಿ) ಅನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ (ಸೆಂಟ್‌ಕಾಮ್) ತಿಳಿಸಿದೆ. ಆದರೆ ದಾಳಿಯ ಬಗ್ಗೆ ಹೆಚ್ಚಿನ ಮಾಹಿತಿ ಏನೂ ತಿಳಿದು ಬಂದಿಲ್ಲ. ಅಮೆರಿಕದ ಸೆಂಟ್ರಲ್ ಕಮಾಂಡ್ ಹೇಳಿಕೆಯ ಪ್ರಕಾರ ಹತನಾಗಿರುವ ವ್ಯಕ್ತಿ “ಭಯೋತ್ಪಾದಕ ಸಂಘಟನೆ ಹುರ್ರಾಸ್ ಅಲ್-ದಿನ್‌ನ ಹಿರಿಯ ಹಣಕಾಸು ಮತ್ತು ಲಾಜಿಸ್ಟಿಕ್ಸ್ ಅಧಿಕಾರಿ ಎಂದು ಹೇಳಿದೆ.
ಭಯೋತ್ಪಾದಕ ಗುಂಪನ್ನು ಅಡ್ಡಿಪಡಿಸುವ ಪ್ರಯತ್ನದ ಭಾಗವಾಗಿ ಅಮೆರಿಕ ಸೇನೆಯು ಹುರ್ರಾಸ್ ಅಲ್-ದಿನ್ ಅಧಿಕಾರಿಗಳನ್ನು ಗುರಿಯಾಗಿಸಿಕೊಂಡಿದೆ. ಅಮೆರಿಕದ ಸೇನೆಯಿಂದ ಇದೇನು ಮೊದಲ ದಾಳಿಯಲ್ಲ, ಈ ಹಿಂದೆ ಜನವರಿ 30 ರಂದು ಅಮೆರಿಕ ಸೇನೆ ಹುರ್ರಾಸ್ ಅಲ್-ದಿನ್‌ನಲ್ಲಿನ ಮತ್ತೊಬ್ಬ ಉಗ್ರರ ಮುಖಂಡ ಮುಹಮ್ಮದ್ ಸಲಾಹ್ ಅಲ್-ಜಬೀರ್ ಎಂಬಾತನ್ನು ಹೊಡೆದುರುಳಿಸಿತ್ತು. 2019ರಲ್ಲಿ ಅಮೆರಿಕ ಹುರ್ರಾಸ್ ಅಲ್-ದಿನ್ ಅನ್ನು ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿದೆ. ಈ ಉಗ್ರ ಸಂಘಟನೆಯ ಬಗ್ಗೆ ಮಾಹಿತಿ ನೀಡಿದವರಿಗೆ ನಗದು ಬಹುಮಾನಗಳನ್ನು ಕೂಡ ನೀಡಿದೆ.
ಡಿಸೆಂಬರ್ 8, 2024 ರಲ್ಲಿ ಸಿರಿಯಾ ಅಧ್ಯಕ್ಷ ಬಶರ್ ಅಲ್ ಅಸ್ಸಾದ್ ಪದಚ್ಯುತರಾದ ಬಳಿಕ, ಸಿರಿಯಾ ಬಂಡುಕೋರರ ಗುಂಪುಗಳು ಮತ್ತು ಕುರ್ದಿಶ್ ನೇತೃತ್ವದ ಪಡೆಗಳ ನಿಯಂತ್ರಣಕ್ಕೆ ಬಂದಿದೆ. ಸಿರಿಯಾದ ಬಂಡುಕೋರ ಗುಂಪುಗಳು ಡಿಸೆಂಬರ್ 7, ಭಾನುವಾರದಂದು ಸಿರಿಯಾದ ರಾಜಧಾನಿ ಡಮಾಸ್ಕಸ್ ಪ್ರವೇಶಿಸಿದವು. ನವೆಂಬರ್‌ನಲ್ಲಿ ತಿಂಗಳು ಅಲೆಪ್ಪೊ, ಹಾಮಾದಂತಹ ಪ್ರಮುಖ ಸಿರಿಯನ್ ನಗರಗಳನ್ನು ವಶಪಡಿಸಿಕೊಳ್ಳುವ ಮೂಲಕ ಆರಂಭಗೊಂಡ ಈ ಬಂಡುಕೋರ ಕಾರ್ಯಾಚರಣೆ, ರಾಜಧಾನಿಯ ವಶಪಡಿಸಿಕೊಳ್ಳುವ ಮೂಲಕ ಬಂಡಾಯ ಮುಕ್ತಾಯಗೊಂಡಿದೆ. ಬಂಡುಕೋರರು ರಾಜಧಾನಿ ಡಮಾಸ್ಕಸ್ ನಗರವನ್ನು ವಶಪಡಿಸಿಕೊಳ್ಳುವ ಕೆಲ ಗಂಟೆಗಳ ಮುನ್ನ ಅಸ್ಸಾದ್ ದೇಶ ತ್ಯಜಿಸಿದ್ದರು.
ಅಮೆರಿಕದ ಸೈನಿಕರು ಈಶಾನ್ಯ ಸಿರಿಯಾದಲ್ಲಿ ನೆಲೆಯಾಗಿದ್ದು, ಎಸ್‌ಡಿಎಫ್ ಜೊತೆಗೂಡಿ ಐಸಿಸ್ ವಿರುದ್ಧ ಹೋರಾಡುತ್ತಿತ್ತು. ಅಮೆರಿಕ ಜೋರ್ಡಾನ್ ಮತ್ತು ಇರಾಕ್‌ಗಳ ಗಡಿಯ ಬಳಿ ಇರುವ ಸಿರಿಯಾದ ದಕ್ಷಿಣದ ಅಲ್ ತನ್ಫ್ ನಲ್ಲೂ ಒಂದು ಸೇನಾ ನೆಲೆಯನ್ನು ಹೊಂದಿದೆ.