ಕಾಬೂಲ್ : ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ಶಾಂತಿ ಮಾತುಕತೆ ವಿಫಲವಾದ ಬೆನ್ನಲ್ಲೇ, ‘ನಾವು ಯುದ್ಧಕ್ಕೆ ಸಿದ್ಧ’ ಎಂದು ಪಾಕಿಸ್ತಾನಕ್ಕೆ ಅಫ್ಘಾನ್ ಖಡಕ್ ಸಂದೇಶ ರವಾನಿಸಿದೆ.
ಇಸ್ತಾನ್‌ಬುಲ್‌ನಲ್ಲಿ ನಡೆದ ಅಫ್ಘಾನಿಸ್ತಾನ-ಪಾಕಿಸ್ತಾನ ಶಾಂತಿ ಮಾತುಕತೆ ಸ್ಥಗಿತಗೊಂಡಿದೆ. ಪಾಕ್‌ನ ಅಪ್ರಬುದ್ಧವಾಗಿ ವರ್ತಿಸಿದೆ. ಟರ್ಕಿ ಮತ್ತು ಕತಾರ್‌ನ ಮಧ್ಯಸ್ಥಿಕೆ ಪ್ರಯತ್ನಗಳ ಹೊರತಾಗಿಯೂ ಪಾಕಿಸ್ತಾನ ಪ್ರಗತಿಗೆ ಅಡ್ಡಿಯಾಗುತ್ತಿದೆ. ಬೇಜವಾಬ್ದಾರಿಯಿಂದ ವರ್ತಿಸುತ್ತಿದೆ ಎಂದು ಅಫ್ಘಾನಿಸ್ತಾನದ ಇಸ್ಲಾಮಿಕ್ ಎಮಿರೇಟ್ ಟೀಕಿಸಿದೆ.
ಪಾಕಿಸ್ತಾನ ಮತ್ತೊಮ್ಮೆ ತನ್ನ ಬೇಜವಾಬ್ದಾರಿ ಮತ್ತು ಅಸಹಕಾರ ಮನೋಭಾವವನ್ನು ಪ್ರದರ್ಶಿಸಿದೆ. ತನ್ನ ಭದ್ರತೆಗೆ ಸಂಬಂಧಿಸಿದ ವಿಚಾರದಲ್ಲಿ ಅಫ್ಘಾನ್ ಮೇಲೆ ಗಂಭೀರ ಆರೋಪಗಳನ್ನು ಮಾಡಲು ಪ್ರಯತ್ನಿಸುತ್ತಿದೆ. ಪಾಕ್ ನಡವಳಿಕೆಯಿಂದ ಶಾಂತಿ ಮಾತುಕತೆ ಯಶಸ್ವಿಯಾಗಿಲ್ಲ ಎಂದು ಹೇಳಿದೆ.
ಅಫ್ಘಾನಿಸ್ತಾನವು ತನ್ನ ಮಣ್ಣನ್ನು ಬೇರೆ ದೇಶದ ವಿರುದ್ಧ ಬಳಸಲು ಯಾರಿಗೂ ಅವಕಾಶ ನೀಡುವುದಿಲ್ಲ. ಯಾವುದೇ ವಿದೇಶಿ ರಾಷ್ಟ್ರವು ತನ್ನ ಸಾರ್ವಭೌಮತ್ವ ಮತ್ತು ಸ್ವಾತಂತ್ರ‍್ಯದ ವಿರುದ್ಧ ವರ್ತಿಸಲು ಅವಕಾಶ ನೀಡುವುದಿಲ್ಲ ಎಂದು ತಾಲಿಬಾನ್ ತಿಳಿಸಿದೆ.
“ಮೂರನೇ ಸುತ್ತಿನ ಮಾತುಕತೆಗಳು ಯಾವುದೇ ಫಲಿತಾಂಶಗಳಿಲ್ಲದೆ ಅನಿಶ್ಚಿತ ಹಂತವನ್ನು ತಲುಪಿವೆ” ಎಂದು ಪಾಕ್ ರಕ್ಷಣಾ ಸಚಿವ ಖವಾಜಾ ಆಸಿಫ್ ತಿಳಿಸಿದ್ದಾರೆ.
































