ಕೋಲ್ಕತಾ : ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ 36 ವರ್ಷಗಳಿಂದ ಸೆರೆವಾಸ ಅನುಭವಿಸುತ್ತಿದ್ದ 104 ವರ್ಷದ ವೃದ್ಧನನ್ನು ಬಿಡುಗಡೆ ಮಾಡುವಂತೆ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದೆ.
1988ರಲ್ಲಿ ಭೂ ವಿವಾದ ಪ್ರಕರಣದಲ್ಲಿ ಸಹೋದರನನ್ನು ಕೊಲೆ ಮಾಡಿದ ಆರೋಪದ ಮೇರೆಗೆ ರಸಿಕ್ತ್ ಮೊಂಡಲ್ ಎಂಬುವವರಿಗೆ ಜೈಲು ಶಿಕ್ಷೆ ವಿಧಿಸಲಾಗಿತ್ತು. ಅವರು ಕಳೆದ 36 ವರ್ಷಗಳಿಂದ ಜೈಲು ಶಿಕ್ಷೆ ಅನುಭವಿಸುತ್ತಿದ್ದರು. ಅವರು ಸುಮಾರು ಒಂದು ವರ್ಷ ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದರು. ಆದರೆ ಜಾಮೀನು ಅವಧಿ ಮುಗಿದ ಬಳಿಕ ಮತ್ತೆ ಜೈಲಿಗೆ ಹಿಂತಿರುಗಬೇಕಿತ್ತು. ಇನ್ನು ಅವರ ಬಿಡುಗಡೆಯ ಮನವಿಯನ್ನು ಸೆಷನ್ ಮತ್ತು ಹೈಕೋರ್ಟ್ ತಿರಸ್ಕರಿಸಿತ್ತು. ಇದೀಗ ಸುಪ್ರೀಂ ಕೋರ್ಟ್ ಆದೇಶದಂತೆ ರಸಿಕ್ತ್ ಅವರನ್ನು ಬಿಡುಗಡೆಗೊಳಿಸಲಾಗಿದೆ.
ಜೈಲಿನಿಂದ ಹೊರಬಂದ ರಸಿಕ್ತ್ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ನಾನಿನ್ನು ತೋಟಗಾರಿಕೆ ಮಾಡುತ್ತೇನೆ, ಕುಟುಂಬ ಸದಸ್ಯರೊಂದಿಗೆ ಪೂರ್ಣ ಸಮಯವನ್ನು ಕಳೆಯುತ್ತೇನೆ. ನಾನು ಎಷ್ಟು ವರ್ಷ ಜೈಲಿನಲ್ಲಿ ಕಳೆದಿದ್ದೇನೆ ಎಂದು ನನಗೆ ನೆನಪಿಲ್ಲ. ಇದು ಎಂದಿಗೂ ಮುಗಿಯದಂತಿತ್ತು. ನನ್ನನ್ನು ಯಾವಾಗ ಇಲ್ಲಿಗೆ ಕರೆತಂದರು ಎಂಬುದು ನನಗೆ ನೆನಪಿಲ್ಲ. ಈಗ ನಾನು ಹೊರಬಂದಿದ್ದೇನೆ. ನನ್ನ ಉತ್ಸಾಹಕ್ಕೆ ನಾನು ನ್ಯಾಯವನ್ನು ನೀಡಬಲ್ಲೆ. ನನ್ನ ಅಂಗಳದಲ್ಲಿರುವ ಸಣ್ಣ ಉದ್ಯಾನದಲ್ಲಿ ಸಸ್ಯಗಳನ್ನು ಬೆಳೆಸುತ್ತೇನೆ. ನಾನು ನನ್ನ ಕುಟುಂಬ ಮತ್ತು ಮೊಮ್ಮಕ್ಕಳೊಂದಿಗೆ ಇರಬೇಕಾದ ಸಮಯ ಕಳೆದುಕೊಂಡೆ. ಇನ್ನು ಅವರೊಂದಿಗೆ ಇರಲು ಬಯಸುತ್ತೇನೆ ಎಂದಿದ್ದಾರೆ.
ಕೆಲವು ವರ್ಷಗಳ ನಂತರ, ಸೆರೆವಾಸದ ಸಮಯದಲ್ಲಿ ಯಾವುದೇ ಅಸಮರ್ಪಕ ಕೃತ್ಯವನ್ನು ಮಾಡದಿದ್ದಲ್ಲಿ ಪ್ರತಿಯೊಬ್ಬ ಕೈದಿಯೂ ಜೈಲಿನಿಂದ ಬಿಡುಗಡೆಗೆ ಅರ್ಹನಾಗಿರುತ್ತಾನೆ. ಅಂತಿಮವಾಗಿ ಅವರ ಬಿಡುಗಡೆಗೆ ಸುಪ್ರೀಂ ಕೋರ್ಟ್ ದಾರಿ ಮಾಡಿಕೊಟ್ಟಿರುವುದು ಸಂತಸ ತಂದಿದೆ ಎಂದು ರಸಿಕ್ತ್ ಪುತ್ರ ತಿಳಿಸಿದ್ದಾರೆ.