ಬೆಂಗಳೂರು: ರಾಜ್ಯದಲ್ಲಿ ಮತ್ತೆ ಮದ್ಯದ ದರ ಹೆಚ್ಚಿಸಲು ಚಿಂತನೆ ನಡೆದಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಎರಡು ಬಾರಿ ಮದ್ಯದ ದರ ಹೆಚ್ಚಳ ಮಾಡಲಾಗಿತ್ತು.
ಇದೀಗ ಮತ್ತೆ ದರ ಹೆಚ್ಚಳ ಮಾಡುವ ಬಗ್ಗೆ ಅಬಕಾರಿ ಇಲಾಖೆ ಚಿಂತನೆ ನಡೆಸಿದೆ ಎಂದು ತಿಳಿದುಬಂದಿದೆ. ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿದ ಬಜೆಟ್‌ನಲ್ಲಿ ಅಬಕಾರಿ ಇಲಾಖೆಗೆ 40 ಸಾವಿರ ಕೋಟಿ ರೂ. ರಾಜಸ್ವ ಸಂಗ್ರಹದ ಗುರಿ ನೀಡಲಾಗಿದೆ. ಹೆಚ್ಚುವರಿ ಗುರಿಯನ್ನು ತಲುಪಲು ಮದ್ಯದ ಬೆಲೆ ಏರಿಸುವುದು ಅನಿವಾರ್ಯ ಎನ್ನಲಾಗಿದೆ.2024-25ನೇ ಸಾಲಿನ ರಾಜ್ಯ ಬಜೆಟ್‌ನಲ್ಲಿ ಅಬಕಾರಿ ಇಲಾಖೆಗೆ 38,500 ಕೋಟಿ ರೂ. ಟಾರ್ಗೆಟ್ ನೀಡಲಾಗಿತ್ತು.
ಕಳೆದ ಬಾರಿಯ ಟಾರ್ಗೆಟ್‌ನಲ್ಲಿ 36,500 ಕೋಟಿ ರೂ. ಮಾತ್ರ ಸಂಗ್ರಹವಾಗಿದೆ. ಈ ಬಾರಿಯ ಬಜೆಟ್‌ನಲ್ಲಿ 40 ಸಾವಿರ ಕೋಟಿ ರೂ. ಟಾರ್ಗೆಟ್ ನೀಡಲಾಗಿದೆ. ಈ ಸಾಲಿನಲ್ಲಿ ಹೆಚ್ಚುವರಿಯಾಗಿ 1400 ಕೋಟಿ ರೂ. ಸಂಗ್ರಹವಾಗಬೇಕಿದ್ದು, ಇದಕ್ಕಾಗಿ ಅಬಕಾರಿ ಇಲಾಖೆ ಮತ್ತೆ ದರ ಹೆಚ್ಚಳ ಮಾಡಲು ಚಿಂತನೆ ನಡೆಸಿದೆ.ಬಜೆಟ್‌ನಲ್ಲಿ ಮದ್ಯದ ದರ ಏರಿಕೆ ಮಾಡಿದರೆ ಟೀಕೆ, ಪ್ರತಿಭಟನೆ ಎದುರಿಸಬೇಕಾಗುತ್ತದೆ.
ಹೀಗಾಗಿ ಸಿದ್ದರಾಮಯ್ಯ ಬಜೆಟ್‌ನಲ್ಲಿ ಅಬಕಾರಿ ಇಲಾಖೆಗೆ 3,500 ಕೋ. ರೂ. ಹೆಚ್ಚುವರಿ ರಾಜಸ್ವ ಸಂಗ್ರಹದ ಗುರಿ ನೀಡುವ ಪರೋಕ್ಷವಾಗಿ ಬೆಲೆ ಏರಿಕೆ ಮಾಡಿದ್ದಾರೆ. ಹೆಚ್ಚುವರಿ ಟಾರ್ಗೆಟ್ ನೀಡಿದರೆ ಯಾವಾಗ ಬೇಕಾದರೂ ಬೆಲೆ ಏರಿಕೆ ಮಾಡಬಹುದು ಎನ್ನುವುದು ಸರ್ಕಾರದ ಪ್ಲ್ಯಾನ್. ಬಜೆಟ್ ಅಧಿವೇಶನ ಮುಗಿಯುತ್ತಿದ್ದಂತೆಯೇ ಅಬಕಾರಿ ಇಲಾಖೆ ಮದ್ಯದ ಬೆಲೆ ಏರಿಕೆ ಮಾಡುವ ಸಾಧ್ಯತೆಗಳಿವೆ.
ಬಹುತೇಕ ಏಪ್ರಿಲ್‌ನಲ್ಲಿ ಏರಿಕೆಯಾಗಬಹುದು ಎನ್ನಲಾಗುತ್ತಿದೆ.ವಿಸ್ಕಿ, ಬ್ರ್ಯಾಂಡಿ, ರಮ್ ಹಾಗೂ ಜಿನ್ ಸೇರಿದಂತೆ ಎಲ್ಲ ರೀತಿಯ ಮದ್ಯದ ಬೆಲೆ ಹೆಚ್ಚಾಗಲಿದೆ. ಪ್ರತಿ ಬ್ರ್ಯಾಂಡ್ ಮೇಲೆ 5ರಿಂದ 20 ರೂ.ವರೆಗೆ ಹೆಚ್ಚಿಸಲು ಚಿಂತನೆ ನಡೆದಿದೆ.