ಬೆಂಗಳೂರು : ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ತಮ್ಮ ಮಗನಿಗೆ ಬುದ್ಧಿ ಹೇಳಲಿ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್ ಅವರು ಆಗ್ರಹಿಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಎಐಸಿಸಿ ಅಧ್ಯಕ್ಷರೇ ನೀವಾದರೂ ಬುದ್ಧಿ ಹೇಳಿ. ಸುಪಾರಿ ಕೊಟ್ಟಂಥ ಇಷ್ಟು ದೊಡ್ಡ ಆರೋಪ ಯಾವ ಸಚಿವರ ಮೇಲೂ ಬಂದಿಲ್ಲ; ಆರೋಪಮುಕ್ತನಾಗುವವರೆಗೆ ನೀನು (ಪ್ರಿಯಾಂಕ ಖರ್ಗೆ) ಸಚಿವನಾಗಿ ಮುಂದುವರೆಯಬೇಡ ಎಂದು ನಿಮ್ಮ ಮಗನಿಗೆ ನೀವಾದರೂ ಬುದ್ಧಿ ಹೇಳಿ ಎಂಬುದಾಗಿ ಮಲ್ಲಿಕಾರ್ಜುನ ಖರ್ಗೆಯವರನ್ನು ಒತ್ತಾಯಿಸಿದರು.
ಸುಪಾರಿ ಕೊಡುವ ಸಚಿವ ಪ್ರಿಯಾಂಕ ಖರ್ಗೆಯವರನ್ನು ನೀವು ಹೇಗೆ ಸಚಿವಸಂಪುಟದಲ್ಲಿ ಇಟ್ಟುಕೊಳ್ಳುತ್ತೀರಿ ಸಿದ್ದರಾಮಯ್ಯನವರೇ? ಎಂದರಲ್ಲದೆ, ಭ್ರಷ್ಟಾಚಾರಕ್ಕಾಗಿ ಹಿಂಸಿಸಿ ಸಾವಿಗೆ ದುಷ್ಪ್ರೇರಣೆ ಆಗಿದ್ದು, ಅದರಲ್ಲಿ ನೇರವಾಗಿ ಸಚಿವರೇ ಭಾಗಿಯಾಗಿದ್ದಾರೆ. ಸುಪಾರಿ ಕೊಟ್ಟದ್ದಕ್ಕೆ ಬೆನ್ನಿಗೆ ನಿಂತರೆ ಸುಪಾರಿ ಕೊಟ್ಟಿದ್ದೀರೆಂದೇ ಅರ್ಥ. ಸಂವಿಧಾನದ ಬಗ್ಗೆ ಮಾತನಾಡುವ ಖರ್ಗೆ, ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರ ಮಗ ಸುಪಾರಿಯಲ್ಲಿ ಭಾಗವಹಿಸಿದ್ದಾರೆ ಎಂದರೆ, ಇವರು ಸಚಿವರಾಗಿ ಒಂದು ಕ್ಷಣವೂ ಇರಬಾರದು ಎಂದು ಆಗ್ರಹಿಸಿದರು.
ಬಟ್ಟೆ ಹರಿದುಕೊಂಡರೂ ರಾಜೀನಾಮೆ ಕೊಡುವುದಿಲ್ಲ ಎಂದು ಪ್ರಿಯಾಂಕ್ ಖರ್ಗೆಯವರು ಹೇಳಿದ್ದು, ನಿಮಗಾಗಿ ನಾವ್ಯಾಕೆ ಬಟ್ಟೆ ಹರಿದುಕೊಳ್ಳೋಣ ಎಂದು ಕೇಳಿದರು. ನಾವಿರೋದೇ ನಿಮ್ಮನ್ನು ರಾಜೀನಾಮೆ ಕೊಡಿಸೋದಕ್ಕೆ ಎಂದು ಸವಾಲು ಹಾಕಿದರು.