ನವದೆಹಲಿ : ನಿರ್ವಹಣಾ ಕಾಮಗಾರಿಯ ಕಾರಣ ಏ. 15ರಿಂದ ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2 ಬಂದ್ ಆಗಲಿದೆ. ಟರ್ಮಿನಲ್ 2ರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಲ್ಲಾ ವಿಮಾನಗಳನ್ನು ಟರ್ಮಿನಲ್ 1 ಮತ್ತು 3ಕ್ಕೆ ಸ್ಥಳಾಂತರಿಸಲಾಗುತ್ತದೆ ಎಂದು ಡಿಐಎಎಲ್ ತಿಳಿಸಿದೆ.
ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2ರಲ್ಲಿ ದುರಸ್ತಿ ಮತ್ತು ನವೀಕರಣ ಕಾರ್ಯಗಳಿಗೆ ಅನುಕೂಲವಾಗುವಂತೆ 4 ತಿಂಗಳ ಕಾಲ ಮುಚ್ಚಲಾಗುವುದು. ಹಾಗಾಗಿ ಟರ್ಮಿನಲ್ 1 ಮತ್ತು ಟರ್ಮಿನಲ್ 3ರಲ್ಲಿ ಮಾತ್ರ ವಿಮಾನಗಳು ಕಾರ್ಯನಿರ್ವಹಿಸಲಿದೆ. ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ಬರುವ ಮೊದಲು ತಮ್ಮ ವಿಮಾನದ ಟರ್ಮಿನಲ್ ಮಾಹಿತಿಯನ್ನು ಪರಿಶೀಲಿಸಿ ಎಂದು ದೆಹಲಿ ಅಂತರಾಷ್ಟ್ರೀಯ ಏರ್‌ಪೋರ್ಟ್ ಲಿಮಿಟೆಡ್ ಪ್ರಯಾಣಿಕರಿಗೆ ಸೂಚನೆ ನೀಡಿದೆ.
ಟರ್ಮಿನಲ್ 2ರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಲ್ಲಾ ಇಂಡಿಗೋ ವಿಮಾನಗಳು ಏಪ್ರಿಲ್ 15ರಿಂದ ಟರ್ಮಿನಲ್ 1ರಿಂದ ಕಾರ್ಯನಿರ್ವಹಿಸುತ್ತವೆ ಎಂದು ಇಂಡಿಗೋ ಸಂಸ್ಥೆ ಘೋಷಿಸಿದೆ.ವಿಮಾನಯಾನ ಸಂಸ್ಥೆಯು ಪ್ರಯಾಣಿಕರಿಗೆ ಕರೆ ಮತ್ತು ಇಮೇಲ್‌ಗಳ ಮೂಲಕ ಮುಂಚಿತವಾಗಿ ಮಾಹಿತಿ ನೀಡುತ್ತದೆ. ಪ್ರಯಾಣಿಕರು ಇಂಡಿಗೋ ವೆಬ್‌ಸೈಟ್ ಅಥವಾ ಮೊಬೈಲ್ ಅಪ್ಲಿಕೇಶನ್‌ನಲ್ಲಿ ತಮ್ಮ ಹೆಸರಿನ ದಾಖಲೆಯನ್ನು ಪಡೆಯುವ ಮೂಲಕ ನಿರ್ಗಮನ ಮತ್ತು ಆಗಮನದ ಟರ್ಮಿನಲ್‌ಗಳನ್ನು ಪರಿಶೀಲಿಸುವಂತೆ ಸೂಚಿಸಿದೆ.