ಬೆಳ್ತಂಗಡಿ: ಪಂಜಾಬ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಧರ್ಮಸ್ಥಳ ಬೊಳಿಯಾರ್ ನಿವಾಸಿ ಏರೋಸ್ಪೇಸ್ ಉದ್ಯೋಗಿಯಾಗಿದ್ದ ಆಕಾಂಕ್ಷಾ ಎಸ್. ನಾಯರ್(22) ಅವರ ಮೃತದೇಹ ಬುಧವಾರ ಬೆಳಗ್ಗೆ ಮನೆಗೆ ತಲುಪಿದೆ. ಆಕಾಂಕ್ಷಾ ಮೃತದೇಹವನ್ನು ಬೆಂಗಳೂರು ವಿಮಾನ ನಿಲ್ದಾಣದಿಂದ ಆಂಬುಲೆನ್ಸ್ ಮೂಲಕ ಧರ್ಮಸ್ಥಳದ ಬೊಳಿಯರ್‌ಗೆ ಬುಧವಾರ ಬೆಳಗ್ಗೆ 9 ಗಂಟೆ ಸುಮಾರಿಗೆ ತರಲಾಯಿತು.
ಮನೆಯಲ್ಲಿ ತಂದೆ ತಾಯಿಯರ ಆಕ್ರಂದನ ಮುಗಿಲು ಮುಟ್ಟಿದ್ದು ನೂರಾರು ಸಂಖ್ಯೆಯಲ್ಲಿ ಜನರು ಆಗಮಿಸಿ ಅಂತಿಮ ದರ್ಶನ ಪಡೆಯುತ್ತಿದ್ದಾರೆ.
ಧರ್ಮಸ್ಥಳ ಬೊಳಿಯಾರ್ ನಿವಾಸಿ ಸುರೇಂದ್ರ ನಾಯರ್ ಮತ್ತು ಸಿಂಧೂದೇವಿ ದಂಪತಿಯ ಎರಡನೇ ಪುತ್ರಿ ಆಕಾಂಕ್ಷಾ ದಿಲ್ಲಿಯಲ್ಲಿ ಏರೋಸ್ಪೇಸ್ ಉದ್ಯೋಗಿಯಾಗಿದ್ದರು. ವಿದೇಶಕ್ಕೆ ಉದ್ಯೋಗಕ್ಕೆ ತೆರಳುವ ಇರಾದೆ ಹೊಂದಿದ್ದ ಆಕಾಂಕ್ಷಾ ಸರ್ಟಿಫಿಕೆಟ್‌ಗಳನ್ನು ಪಡೆಯುವುದಕ್ಕಾಗಿ ತಾನು ಕಲಿತ ಪಂಜಾಬಿನ ಎಲ್.ಪಿ. ವಿಶ್ವವಿದ್ಯಾನಿಲಯಕ್ಕೆ ತೆರಳಿದ್ದರು. ಅಲ್ಲಿ ಮೇ 17ರಂದು ಕಾಲೇಜು ಕಟ್ಟಡದ 4ನೇ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿತ್ತು.
ಈ ಹಿನ್ನೆಲೆಯಲ್ಲಿ ಪಂಜಾಬಿಗೆ ತೆರಳಿದ್ದ ಮೃತಳ ಹೆತ್ತವರು ಮಗಳ ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸಿ ಪೊಲೀಸ್ ದೂರು ದಾಖಲಿಸಿದ್ದರು. ಅದರಂತೆ ಪಂಜಾಬ್ ಪೊಲೀಸರು ಎಲ್.ಪಿ.ಯು ಪ್ರಾಧ್ಯಾಪಕ ಕೇರಳ ಮೂಲದ ಬಿಜಿಲ್ ಮ್ಯಾಥ್ಯೂ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಆತನನ್ನು ಬಂಧಿಸಿದ್ದಾರೆ.
ಎರಡು ಮಕ್ಕಳ ತಂದೆಯಾಗಿರುವ ಬಿಜಿಲ್ ಮ್ಯಾಥ್ಯೂ ಜೊತೆಗೆ ಆಕಾಂಕ್ಷಾಳಿಗೆ ಪ್ರೇಮಾಂಕುರವಾಗಿತ್ತು. ಆದರೆ ಬಿಜಿಲ್ ಮ್ಯಾಥ್ಯೂ ಮದುವೆಯಾಗಲು ನಿರಾಕರಿಸಿದ ಹಿನ್ನೆಲೆಯಲ್ಲಿ ಆಕಾಂಕ್ಷಾ ಜಗಳವಾಡಿ ಕಾಲೇಜಿನ ಕಟ್ಟಡದಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಪಂಜಾಬ್ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.