ಲಖನೌ: ಕೇಂದ್ರ ಮತ್ತು ರಾಜ್ಯದಲ್ಲಿರುವ ಆಡಳಿತಾರೂಢ ಬಿಜೆಪಿ ಸರ್ಕಾರ ತಮ್ಮ ಭರವಸೆಗಳನ್ನು ಈಡೇರಿಸಿಲ್ಲ. ಸಾರ್ವಜನಿಕರನ್ನು ದಾರಿ ತಪ್ಪಿಸಲು ಪಕ್ಷವು ಹಳೆಯ ಯೋಜನೆಗಳನ್ನು ಹೊಸ ಹೆಸರುಗಳೊಂದಿಗೆ ಮರುರೂಪಿಸುತ್ತಿದೆ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಹೇಳಿದ್ದಾರೆ.
ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಬಿಜೆಪಿ ಶೂನ್ಯವಾಗುವ ಮೊದಲು, ಅವರ ಸುತ್ತಲಿನ ಎಲ್ಲವೂ ಶೂನ್ಯವಾಗುತ್ತಿದೆ. ಅವರ ‘ಶೂನ್ಯ ಸಹಿಷ್ಣುತೆ’ ಶೂನ್ಯವಾದಂತೆಯೇ, ‘ಶೂನ್ಯ ಬಡತನ’ ಎಂಬ ಬಿಜೆಪಿಯ ಘೋಷಣೆಯೂ ಸುಳ್ಳಾಗಿದೆ. ಭಾರತವು ಗಣಿತದಲ್ಲಿ ಶೂನ್ಯದ ಪರಿಕಲ್ಪನೆಯನ್ನು ಜಗತ್ತಿಗೆ ಪರಿಚಯಿಸಿತು, ಜನರಲ್ಲಿ ಸುಳ್ಳನ್ನು ಹರಡಲು ಅಲ್ಲ ಎಂದು ಬರೆದುಕೊಂಡಿದ್ದಾರೆ.
ಬಡತನವನ್ನು ಮಾತುಗಳಿಂದಲ್ಲ, ಕಾರ್ಯಗಳಿಂದ ನಿರ್ಮೂಲನೆ ಮಾಡಲಾಗುತ್ತದೆ. ಕಾರ್ಯದ ವಿಷಯಕ್ಕೆ ಬಂದಾಗ, ಬಿಜೆಪಿ ಸರ್ಕಾರ ಶೂನ್ಯದಲ್ಲಿದೆ. ಸರ್ಕಾರ ನಿರ್ಗಮಿಸುವ ಮೊದಲು ಎಲ್ಲವನ್ನೂ ಶೂನ್ಯ ಸ್ಥಿತಿಗೆ ತಲುಪಿಸುತ್ತದೆ. ಬಿಜೆಪಿ ಬಡವರಿಗೆ ಸುಳ್ಳು ಹೇಳುವುದನ್ನು ನಿಲ್ಲಿಸಿ, ತನ್ನ ಭರವಸೆಗಳನ್ನು ಈಡೇರಿಸಬೇಕು ಎಂದು ಅವರು ಪೋಸ್ಟ್ ಮಾಡಿದ್ದಾರೆ.