ಲಖನೌ : ಬಿಜೆಪಿ ತನ್ನ ಅಧಿಕಾರ ದುರುಪಯೋಗಪಡಿಸಿಕೊಂಡು ಪ್ರಜಾಪ್ರಭುತ್ವವನ್ನು ಕೊಲೆ ಮಾಡುತ್ತಿದೆ. ದೇಶದ ಪ್ರಜಾಪ್ರಭುತ್ವ ಮತ್ತು ಸಂವಿಧಾನಕ್ಕೆ ಬಿಜೆಪಿ ಅಪಾಯಕಾರಿಯಾಗಿದೆ ಎಂದು ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ತಿಳಿಸಿದ್ದಾರೆ.
ಲಖನೌದಲ್ಲಿ ಸಮಾಜವಾದಿ ಪಕ್ಷದ ಪ್ರಧಾನ ಕಚೇರಿಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಸಂವಿಧಾನದಿಂದ ಜನರಿಗೆ ಮತದಾನದ ಹಕ್ಕು ಸಿಕ್ಕಿದೆ. ಆದರೆ, ಬಿಜೆಪಿ ಅದನ್ನು ಕಸಿದುಕೊಳ್ಳುತ್ತಿದೆ. ಉಪಚುನಾವಣೆಯಲ್ಲಿ ಮತಗಳನ್ನು ಲೂಟಿ ಮಾಡಲಾಗಿದೆ. ಜನರನ್ನು ಮತದಾನ ಮಾಡದಂತೆ ತಡೆಯಲಾಗಿದೆ ಎಂದಿದ್ದಾರೆ.
ಬಾಬಾ ಸಾಹೇಬ್ ಅಂಬೇಡ್ಕರ್ ಅವರು ನೀಡಿದ ಸಂವಿಧಾನವು ಬಡವರು, ರೈತರು, ಅವಕಾಶ ವಂಚಿತರಿಗೆ ಶಕ್ತಿ ನೀಡುತ್ತದೆ. ಆದರೆ, ಬಿಜೆಪಿ ಸಂವಿಧಾನವನ್ನು ದುರ್ಬಲಗೊಳಿಸುತ್ತಿದೆ. ಸಂವಿಧಾನವನ್ನು ಜಾರಿಗೆ ತರಲು ಒಳ್ಳೆಯ ಜನರ ಅಗತ್ಯವಿದೆ ಎಂದು ಕಿಡಿಕಾರಿದ್ದಾರೆ.
ಬಿಜೆಪಿ ನಕಲಿ ಸುದ್ದಿಗಳ ಮೂಲವಾಗಿದೆ, ಅದು ಸುಳ್ಳುಗಳನ್ನು ಮಾತ್ರ ಪ್ರಚಾರ ಮಾಡುತ್ತದೆ. ವಿರೋಧ ಪಕ್ಷಗಳ ನಾಯಕರ ವಿರುದ್ಧ ಸುಳ್ಳು ಪ್ರಕರಣಗಳನ್ನು ದಾಖಲಿಸುತ್ತದೆ. ಅದು ಸರ್ವಾಧಿಕಾರದ ಹಾದಿಯಲ್ಲಿದೆ. ಬಿಜೆಪಿ ಎಂದಿಗೂ ದೇಶದ ಬಡ ಜನರು ಮತ್ತು ರೈತರಿಗಾಗಿ ಕೆಲಸ ಮಾಡಿಲ್ಲ. ಬದಲಾಗಿ, ತನ್ನ ಬಂಡವಾಳಶಾಹಿ ಸ್ನೇಹಿತರಿಗಾಗಿ ನಿರ್ಧಾರಗಳನ್ನು ತೆಗೆದುಕೊಂಡಿದೆ, ಅವರಿಗೆ ಲಾಭ ಪಡೆಯುವಂತೆ ಮಾಡಿದೆ. ಬಿಜೆಪಿ ಸರ್ಕಾರದ ನಿರ್ಧಾರಗಳಿಂದ ದೇಶದ ಆರ್ಥಿಕತೆ ನಾಶವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.