ಉತ್ತರ ಪ್ರದೇಶದ: ಪ್ರಯಾಗ್ ರಾಜ್‌ನಲ್ಲಿ ಮಹಾಕುಂಭ ಮೇಳದಲ್ಲಿ ಸಂಭವಿಸಿದ ಭೀಕರ ಕಾಲ್ತುಳಿತಕ್ಕೆ ಸಂಬಂಧಿಸಿದಂತೆ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.ಲೋಕಸಭೆಯನ್ನುದ್ದೇಶಿಸಿ ಮಾತನಾಡಿದ ಕನ್ನೌಜ್ ಕ್ಷೇತ್ರದ ಸಂಸದ ಅಖಿಲೇಶ್ ಯಾದವ್ , ಕಾಲ್ತುಳಿತದಲ್ಲಿ ಮೃತಪಟ್ಟವರ ನಿಜವಾದ ಅಂಕಿಅಂಶಗಳನ್ನು ಒದಗಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು ಮತ್ತು ಸರ್ವಪಕ್ಷ ಸಭೆಗೆ ಕರೆ ನೀಡಿದರು.
ಸರ್ಕಾರ ನಿರಂತರವಾಗಿ ಬಜೆಟ್ ಅಂಕಿಅಂಶಗಳನ್ನು ನೀಡುತ್ತಿರುವಾಗ, ದಯವಿಟ್ಟು ಮಹಾಕುಂಭದಲ್ಲಿ ಮೃತಪಟ್ಟವರ ಅಂಕಿಅಂಶಗಳನ್ನು ಸಹ ನೀಡಿ. ಮಹಾಕುಂಭದ ವ್ಯವಸ್ಥೆಗಳ ಬಗ್ಗೆ ಸ್ಪಷ್ಟೀಕರಣ ನೀಡಲು ಸರ್ವಪಕ್ಷ ಸಭೆ ಕರೆಯಬೇಕೆಂದು ನಾನು ಒತ್ತಾಯಿಸುತ್ತೇನೆ ಎಂದು ಹೇಳಿದರು.
ಮಹಾಕುಂಭ ದುರ್ಘಟನೆಯಲ್ಲಿ ಮೃತಪಚ್ಚವರ ಅಂಕಿಅಂಶಗಳು, ಗಾಯಾಳುಗಳ ಚಿಕಿತ್ಸೆ, ಔಷಧಿಗಳು, ವೈದ್ಯರ ಲಭ್ಯತೆ, ಆಹಾರ, ನೀರು ಮತ್ತು ಸಾರಿಗೆ ವಿವರಗಳನ್ನು ಸಂಸತ್ತಿನಲ್ಲಿ ಮಂಡಿಸಬೇಕು ಎಂದು ಒತ್ತಾಯಿಸಿದರು. ಕಾಲ್ತುಳಿತ ಘಟನೆಗೆ ಹೊಣೆಯಾಗುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ಯಾವುದೇ ತಪ್ಪು ನಡೆದಿಲ್ಲದಿದ್ದರೆ ಸರ್ಕಾರ ಅಂಕಿಅಂಶಗಳನ್ನು ಏಕೆ ಮುಚ್ಚಿಡುತ್ತಿದೆ ಎಂದು ಪ್ರಶ್ನಿಸಿದರು.
ಮಹಾ ಕುಂಭಮೇಳ ದುರಂತಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು, ಸತ್ಯವನ್ನು ಮರೆಮಾಚುವವರನ್ನು ಶಿಕ್ಷಿಸಬೇಕು. ಯಾವುದೇ ಅಪರಾಧವಿಲ್ಲದಿದ್ದರೆ, ಡಬಲ್ ಎಂಜಿನ್ ಸರ್ಕಾರ ಏಕೆ ಕಾಲ್ತುಳಿತದ ಬಗ್ಗೆ ನಿಖರ ಮಾಹಿತಿ ನೀಡುತ್ತಿಲ್ಲ, ಅಂಕಿಅಂಶಗಳನ್ನು ಏಕೆ ಮರೆಮಾಚುತ್ತಿದೆ ಎಂದು ಕೇಳಿದರು.
ಉತ್ತರ ಪ್ರದೇಶ ಸರ್ಕಾರ ಒದಗಿಸಿದ ಅಂಕಿಅಂಶಗಳ ಪ್ರಕಾರ, ಜನವರಿ 29 ರಂದು ಮಹಾಕುಂಭದಲ್ಲಿ ಮೌನಿ ಅಮವಾಸ್ಯೆಯ ಸಮಯದಲ್ಲಿ ಸಂಭವಿಸಿದ ಕಾಲ್ತುಳಿತದಲ್ಲಿ 30 ಜನರು ಮೃತಪಟ್ಟು 60 ಜನರು ಗಾಯಗೊಂಡಿದ್ದಾರೆ.ನಿನ್ನೆ ಸಂಸತ್ತಿನಲ್ಲಿ ವಿರೋಧ ಪಕ್ಷದ ನಾಯಕರು ಉಭಯ ಸದನಗಳಲ್ಲಿ ಪ್ರತಿಭಟನೆ ನಡೆಸಿದರು, ಕೇಂದ್ರ ಸರ್ಕಾರ ಮೃತಪಟ್ಟವರ ಬಗ್ಗೆ ನಿಖರ ಮಾಹಿತಿ ನೀಡಬೇಕು. ದುರಂತದ ಜವಾಬ್ದಾರಿಯನ್ನು ಸರ್ಕಾರ ತೆಗೆದುಕೊಳ್ಳಬೇಕೆಂದು ಎಂದು ಸಾಮೂಹಿಕವಾಗಿ ಒತ್ತಾಯಿಸಿದ್ದರು.