ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ 10ನೇ ಆರೋಪಿ ಶರದ್ ಬಾವುಸಾಹೇಬ್ ಕಲಾಸ್ಕರ್ ಅವರಿಗೆ ಬೆಂಗಳೂರಿನ ಪ್ರಧಾನ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯವು ಬುಧವಾರ ಜಾಮೀನು ನೀಡಿದೆ. ಇದರೊಂದಿಗೆ ಪ್ರಕರಣದಲ್ಲಿ ವಿಚಾರಣೆ ಎದುರಿಸುತ್ತಿರುವ ಎಲ್ಲಾ 17 ಆರೋಪಿಗಳಿಗೂ ಜಾಮೀನಿನ ಸಿಕ್ಕಂತಾಗಿದೆ.ಮಹಾರಾಷ್ಟ್ರದ ಶರದ್ ಬಾಹುಸಾಹೇಬ್ ಕಾಲಸ್ಕರ್ ಸಲ್ಲಿಸಿದ ಅರ್ಜಿಯನ್ನು ಬೆಂಗಳೂರಿನ ಪ್ರಧಾನ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಬಿ ಮುರಳೀಧರ್ ಪೈ ಅವರು ಪುರಸ್ಕರಿಸಿದ್ದು, ಸಮಾನತೆಯ ಆಧಾರದ ಮೇಲೆ ಜಾಮೀನು ಮಂಜೂರು ಮಾಡಿದ್ದಾರೆ,ಸಂವಿಧಾನದ 21ರ ಅಡಿ ಬದುಕುವುದು ಮೂಲಭೂತ ಹಕ್ಕು. ಆರೋಪಿಗಳ ವಿರುದ್ಧ ವಿಚಾರಣೆ ಬಾಕಿಯಿರುವ ಸಂದರ್ಭದಲ್ಲಿ ಅವರ ವೈಯಕ್ತಿಕ ಹಕ್ಕು ಕಸಿದುಕೊಳ್ಳಲಾಗುವುದಿಲ್ಲ.
ಅನಗತ್ಯ ವಿಳಂಬವು ಬದುಕುವ ಹಕ್ಕನ್ನು ಮೊಟಕುಗೊಳಿಸಿದಂತಾಗಲಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯ ಪಟ್ಟಿದೆ. ಹೀಗಾಗಿ, ಅರ್ಜಿದಾರರು 2018ರ 4.9.2018ರಿಂದ ಬಂಧನದಲ್ಲಿದ್ದು, ಜಾಮೀನು ಮಂಜೂರು ಮಾಡಬಹುದಾಗಿದೆ ಎಂದು ನ್ಯಾಯಾಧೀಶರು ಹೇಳಿದರು.ವಿಚಾರಣೆ ವೇಳೆ ಅರ್ಜಿದಾರ ಆರೋಪಿಗೆ ಜಾಮೀನು ಮಂಜೂರು ಮಾಡಿದರೆ ಮತ್ತೆ ಇದೇ ರೀತಿಯ ಕೃತ್ಯಗಳಲ್ಲಿ ಭಾಗಿಯಾಗುತ್ತಾರೆ. ಸಾಕ್ಷಿಗಳಿಗೆ ಬೆದರಿಕೆ ಹಾಕುತ್ತಾರೆ ಎಂಬುದಾಗಿ ಪ್ರಾಸಿಕ್ಯೂಷನ್ ಪರ ವಕೀಲರು ಆತಂಕ ವ್ಯಕ್ತಪಡಿಸಿ ಜಾಮೀನು ನಿರಾಕರಿಸಬೇಕು ಎಂದು ಕೋರಿದ್ದರು.