ಶ್ರೀನಗರ: ಪಹಲ್ಗಾಮ್ನಲ್ಲಿ ಪ್ರವಾಸಿಗರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸುವ ಸಂದರ್ಭದಲ್ಲೇ ಜಿಪ್ಲೈನ್ ಆಪರೇಟರ್ವೊಬ್ಬ ಅಲ್ಲಾಹು ಅಕ್ಬರ್ ಎಂದು ಮೂರು ಬಾರಿ ಕೂಗಿರುವುದು ಕಂಡುಬಂದಿದೆ. ಈ ದೃಶ್ಯ ಪ್ರವಾಸಿಗರೊಬ್ಬರ ಸೆಲ್ಫಿ ವೀಡಿಯೊದಲ್ಲಿ ಸೆರೆಯಾಗಿದೆ.
‘ಅಲ್ಲಾಹು ಅಕ್ಬರ್’ ಎಂದು ಕೂಗಿದ್ದ ಜಿಪ್ಲೈನ್ ಆಪರೇಟರ್ನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಮತ್ತು ಜಮ್ಮು-ಕಾಶ್ಮೀರ ಪೊಲೀಸರು ವಿಚಾರಣೆಗಾಗಿ ಕರೆಸಿಕೊಂಡಿರುವುದಾಗಿ ಮೂಲಗಳು ತಿಳಿಸಿವೆ. ಸ್ಥಳದಲ್ಲಿದ್ದ ಎಲ್ಲರನ್ನೂ ತನಿಖಾ ಸಂಸ್ಥೆಗಳು ವಿಚಾರಣೆಗೆ ಕರೆಸಿಕೊಂಡಿವೆ. ಜಿಪ್ಲೈನ್ ಆಪರೇಟರ್ನನ್ನು ಈಗ ಮತ್ತೆ ಕರೆಸಲಾಗಿದ್ದು, ಏಜೆನ್ಸಿಗಳು ಆತನ ವಿಚಾರಣೆ ನಡೆಸಲಿವೆ. ಪಹಲ್ಗಾಮ್ನಲ್ಲಿ ಜಿಪ್ಲೈನ್ನಲ್ಲಿ ಹೋಗುವಾಗ ರಿಷಿ ಭಟ್ ಎಂಬವರು ಸೆಲ್ಫಿ ವೀಡಿಯೊವೊಂದನ್ನು ಮಾಡಿಕೊಂಡಿದ್ದರು. ಅದರಲ್ಲಿ ಉಗ್ರರು ದಾಳಿ ನಡೆಸುತ್ತಿರುವ ದೃಶ್ಯವೂ ಸೆರೆಯಾಗಿತ್ತು. ಈ ವೀಡಿಯೊ ಎಲ್ಲೆಡೆ ವೈರಲ್ ಆದ ಬೆನ್ನಲ್ಲೇ ಎಲ್ಲರನ್ನೂ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.
ಜಿಪ್ಲೈನ್ ಆಪರೇಟರ್ ‘ಅಲ್ಲಾಹು ಅಕ್ಬರ್’ ಎಂದು ಕೂಗಿದ ನಂತರ ತಕ್ಷಣವೇ ಗುಂಡಿನ ಸದ್ದು ಕೇಳಿಬಂತು. ನನಗಿಂತ ಮುಂಚೆ ನನ್ನ ಪತ್ನಿ ಮತ್ತು ಮಗ ಜಿಪ್ಲೈನ್ನಲ್ಲಿ ಹೋಗಿದ್ದರು. ಆಗ ಜಿಪ್ಲೈನ್ ಆಪರೇಟರ್ ‘ಅಲ್ಲಾಹು ಅಕ್ಬರ್’ ಎಂದಿರಲಿಲ್ಲ. ಆದರೆ, ನಾನು ಜಿಪ್ಲೈನ್ನಲ್ಲಿ ಹೋಗುವಾಗ ಹಾಗೆ ಹೇಳಿದ್ದ. ಅಲ್ಲಾಹು ಅಕ್ಬರ್ ಎಂದು ಕೂಗಿದ ಸ್ವಲ್ಪ ಹೊತ್ತಿನಲ್ಲೇ ಗುಂಡಿನ ಶಬ್ದ ಕೇಳಿಬಂತು ಎಂದು ಸೆಲ್ಫಿ ವೀಡಿಯೋ ಮಾಡಿಕೊಂಡಿದ್ದ ರಿಷಿ ಭಟ್ ತಿಳಿಸಿದ್ದಾರೆ.
ನಾನು ಸೆಲ್ಫಿ ವೀಡಿಯೋ ಮಾಡಿಕೊಳ್ಳುವಾಗ ವ್ಯಕ್ತಿಯೊಬ್ಬ ಕೆಳಗೆ ಬೀಳುತ್ತಿರುವುದು ಕಾಣಿಸಿತು. ಏನೋ ಸಮಸ್ಯೆ ಆಗಿದೆ ಅಂತ ನನಗಾಗ ಅರಿವಾಯಿತು. ತಕ್ಷಣವೇ ಜಿಪ್ಲೈನ್ ಹಗ್ಗವನ್ನು ನಿಲ್ಲಿಸಿ ಸುಮಾರು 15 ಅಡಿ ಎತ್ತರದಿಂದ ಕೆಳಗೆ ಹಾರಿ, ನನ್ನ ಹೆಂಡತಿ ಮತ್ತು ಮಗನನ್ನು ಕರೆದುಕೊಂಡು ಓಡಿದೆ. ಆ ಕ್ಷಣದಲ್ಲಿ ನನ್ನ ಮತ್ತು ಕುಟುಂಬದವರ ಜೀವ ಉಳಿಸಿಕೊಳ್ಳುವ ಏಕೈಕ ಆಲೋಚನೆಯಲ್ಲಿದ್ದೆ ಎಂದು ಭಟ್ ಮಾಹಿತಿ ಹಂಚಿಕೊಂಡಿದ್ದಾರೆ.