ಹಾಸನ : ಅಂಬಾರಿ ಆನೆ ಎಂದೇ ಪ್ರಖ್ಯಾತಿ ಪಡೆದ ಹಾಗು ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ವೀರಮರಣ ಹೊಂದಿದ್ದ ಅರ್ಜುನನ ಪ್ರತಿಮೆ ಹಾಗೂ ಸ್ಮಾರಕ ಸಿದ್ಧಗೊಂಡಿದ್ದು, ಶೀಘ್ರದಲ್ಲೇ ಉದ್ಘಾಟನೆಗೊಳ್ಳಲಿದೆ.
ಅರ್ಜುನ ಸಾವನ್ನಪ್ಪಿ ಒಂದು ವರ್ಷ ಕಳೆದ ಬಳಿಕ ಅರ್ಜುನನ ಸ್ಮಾರಕ ಹಾಗೂ ಪುತ್ಥಳಿ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಬಳ್ಳೆಯಲ್ಲಿ ನಿರ್ಮಾಣಗೊಂಡಿರುವ ಅರ್ಜುನ ಪ್ರತಿಮೆಯನ್ನು ದಬ್ಬಳ್ಳಿಕಟ್ಟೆಗೆ ತಂದು ಪ್ರತಿಷ್ಠಾಪಿಸಲಾಗಿದೆ ಎಂದು ಹೇಳಲಾಗಿದೆ. ಅರ್ಜುನನ ಪ್ರತಿಮೆ ಪ್ರತಿಷ್ಠಾಪಿಸುವ ವೇಳೆ ಯಾವುದೇ ವಿಘ್ನವಾಗದಂತೆ ಅರ್ಜುನನ ಪ್ರತಿಮೆಗೆ ಅರಣ್ಯ ಇಲಾಖೆ ಅಧಿಕಾರಿಗಳು ಪೂಜೆ ಸಲ್ಲಿಸಿದ್ದಾರೆ.
2023 ಡಿಸೆಂಬರ್ 4 ರಂದು ಸಕಲೇಶಪುರ ತಾಲ್ಲೂಕಿನ ದಬ್ಬಳ್ಳಿಕಟ್ಟೆ ಅರಣ್ಯದಲ್ಲಿ ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಮದಗಜದೊಂದಿಗೆ ಕಾದಾಡಿ ತೀವ್ರವಾಗಿ ಗಾಯಗೊಂಡಿದ್ದ ಅರ್ಜುನ ಕಾಡಿನಲ್ಲೇ ಸಾವನ್ನಪ್ಪಿತ್ತು. ಶೀಘ್ರದಲ್ಲಿಯೇ ಅರ್ಜುನನ ಪ್ರತಿಮೆ ಹಾಗೂ ಸ್ಮಾರಕ ಲೋಕಾರ್ಪಣೆಗೊಳ್ಳಲಿದೆ.