ಅಮರಾವತಿ : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಕಳೆದ ರಾತ್ರಿ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ‘ಸ್ಪೇಸ್ ಡಾಕಿಂಗ್ ಎಕ್ಸ್ಪರಿಮೆಂಟ್’ (ಸ್ಪೆಡೆಕ್ಸ್)ನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ.
ಮಹತ್ವಾಕಾಂಕ್ಷೆಯ 24 ಪೇ-ಲೋಡ್ ಗಳನ್ನು ಒಳಗೊಂಡ PSLV-C60 ಸ್ಪೇಸ್ ಡಾಕಿಂಗ್ ಎಕ್ಸ್ ಪರಿಮೆಂಟ್-ಸ್ಪೆಡೆಕ್ಸ್ ಉಪಗ್ರಹವನ್ನು ರಾಕೆಟ್ ಮೂಲಕ ಯಶಸ್ವಿಯಾಗಿ ಅಂತರಿಕ್ಷಕ್ಕೆ ಹಾರಿಸಲಾಯಿತು. ಈ ಮೂಲಕ ವಿಶ್ವದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗಳ ಪೈಕಿ ಭಾರತ ತನ್ನದೇ ಚರಿತ್ರೆ ಬರೆಯಲು ಹೊರಟಿದೆ.
PSLV-C60 ರಾಕೆಟ್ ಉಡಾವಣೆಯನ್ನು ರಾತ್ರಿ 9.58ಕ್ಕೆ ನಿಗಧಿಪಡಿಸಲಾಗಿತ್ತು. ಆದರೆ ಅಂತರಿಕ್ಷದಲ್ಲಿ ಟ್ರಾಫಿಕ್ ಸಮಸ್ಯೆ ಇದ್ದ ಕಾರಣ ಇಸ್ರೋ, ಸಮಯವನ್ನು ಬದಲಾವಣೆ ಮಾಡಿ, 9.58ರ ಬದಲು ರಾತ್ರಿ 10 ಗಂಟೆಗೆ ಉಪಗ್ರಹವನ್ನು ಉಡಾವಣೆ ಮಾಡಿತು.
ಬಾಹ್ಯಾಕಾಶ ಉಪಗ್ರಹಗಳ ಡಾಕಿಂಗ್ ಮತ್ತು ಅನ್ಡಾಕಿಂಗ್ ಪ್ರಯೋಗ ಯಶಸ್ವಿಯಾದಲ್ಲಿ ಸ್ಪೇಡೆಕ್ಸ್ನಲ್ಲಿ ಯಶಸ್ಸು ಕಂಡ ವಿಶ್ವದ ೪ನೇ ದೇಶ ಎಂಬ ಹೆಗ್ಗಳಿಕೆ ಗಳಿಸಲಿದೆ. ಈಗಾಗಲೇ ಈ ಪ್ರಯೋಗದಲ್ಲಿ ಅಮೆರಿಕ, ರಷ್ಯಾ ಮತ್ತು ಚೀನಾ ಯಶಸ್ಸು ಕಂಡಿದ್ದು, ಭಾರತವೂ ಈ ಪ್ರಯೋಗದಲ್ಲಿ ಯಶಸ್ವಿಯಾದರೆ ನಾಲ್ಕನೇ ದೇಶವಾಗಿ ಹೊರಹೊಮ್ಮಲಿದೆ.
ಈ ಪ್ರಯೋಗದ ಭಾಗವಾಗಿ ಎಸ್ಡಿಎಕ್ಸ್೦೧ ಮತ್ತು ಎಸ್ಡಿಎಕ್ಸ್೦೨ ಹೆಸರಿನ ಎರಡು ಉಪಗ್ರಹಗಳನ್ನು ಹೊತ್ತ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ ರಾಕೆಟ್ ಸೋಮವಾರ ಉಡಾವಣೆ ಮಾಡಲಾಗಿದೆ. ಭೂಮಿಯಿಂದ 476 ಕಿ.ಮೀ ದೂರದ ಕಕ್ಷೆಗೆ ಉಪಗ್ರಹಗಳನ್ನು ರಾಕೆಟ್ ಯಶಸ್ವಿಯಾಗಿ ಸೇರಿಸಿದ ಬಳಿಕ ಜನವರಿ ಮೊದಲ ವಾರದಲ್ಲಿ ಇಸ್ರೋ ಡಾಕಿಂಗ್ ಪ್ರಯೋಗ ನಡೆಯಲಿದೆ ಎಂದು ತಿಳಿದುಬಂದಿದೆ.