ವಾಷಿಂಗ್ಟನ್: ಈ ಹಿಂದೆ ಕೋವಿಡ್ ಸಾಂಕ್ರಾಮಿಕದ ಬಳಿಕ ವಿಶ್ವ ಆರೋಗ್ಯ ಸಂಸ್ಥೆಯ ವಿರುದ್ಧ ನಿರಂತರ ವಾಗ್ದಾಳಿ ನಡೆಸಿಕೊಂಡು ಬಂದಿದ್ದ ಅಮೆರಿಕ ಇಂದು ಅಂತಿಮವಾಗಿ ಅದರ ಸದಸ್ಯತ್ವದಿಂದ ಹೊರಗೆ ಬಂದಿದೆ.
ಅಮೆರಿಕ ಆರೋಗ್ಯ ಇಲಾಖೆ ಹಾಗೂ ವಿದೇಶಾಂಗ ಇಲಾಖೆ ಜಂಟಿಯಾಗಿ ವಿಶ್ವ ಆರೋಗ್ಯ ಸಂಸ್ಥೆಯಿಂದ ಅಮೆರಿಕ ಹೊರ ಬಂದಿರುವ ವಿಷಯವನ್ನು ತಿಳಿಸಿವೆ. ಸದಸ್ಯತ್ವ ಹಿಂಪಡೆದ ಬೆನ್ನಲ್ಲೇ ಜಿನಿವಾದಲ್ಲಿರುವ ಆರೋಗ್ಯ ಸಂಸ್ಥೆಯ ಕೇಂದ್ರ ಕಚೇರಿಯಲ್ಲಿದ್ದ ಅಮೆರಿಕ ರಾಷ್ಟ್ರಧ್ವಜವನ್ನು ತೆರವು ಮಾಡಲಾಗಿದೆ.
ಕಳೆದ ವರ್ಷ ಜನವರಿ 20ರಂದು ಅಮೆರಿಕ ಅಧ್ಯಕ್ಷರಾಗಿ ಡೊನಾಲ್ಡ್ ಟ್ರಂಪ್ ಅಧಿಕಾರವಹಿಸಿಕೊಂಡಿದ್ದರು. ವಿಶ್ವ ಆರೋಗ್ಯ ಸಂಸ್ಥೆಯಿಂದ ಹೊರಬರುವ ನಿರ್ಧಾರ ಪ್ರಕಟಿಸಿದ್ದರು. ವಿಶ್ವ ಆರೋಗ್ಯ ಸಂಸ್ಥೆ ಕೋವಿಡ್ 19 ಸಾಂಕ್ರಾಮಿಕ ರೋಗ ನಿರ್ವಹಿಸುವಲ್ಲಿ ವಿಫಲವಾಗಿದೆ. ಪ್ರಸ್ತುತ ಅಗತ್ಯತೆಗೆ ಅನುಗುಣವಾಗಿ ಸುಧಾರಣಾ ಕ್ರಮ ಕೈಗೊಳ್ಳುವಲ್ಲಿ WHO ವಿಫಲವಾಗಿದೆ ಎಂದು ಅಮೆರಿಕ ಆರೋಪಿಸಿದೆ.

































