ವಾಷಿಂಗ್ ಟನ್: ಭಾರತೀಯ ಮೂಲದ ಅಮೆರಿಕನ್ ಕಾಶ್ ಪಟೇಲ್ ಅವರು ಶುಕ್ರವಾರ(ಫೆ.21) ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್ (FBI) ನ ನೂತನ ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿದರು. ಈ ಸಂದರ್ಭ ಅವರು ಭಗವದ್ಗೀತೆಯ ಮೇಲೆ ಪ್ರಮಾಣ ವಚನ ಸ್ವೀಕರಿಸಿದ್ದು ವಿಶೇಷವಾಗಿತ್ತು.
ಸಾಮಾನ್ಯವಾಗಿ ಬೈಬಲ್ ಮೇಲೆ ಪ್ರಮಾಣ ವಚನ ಸ್ವೀಕರಿಸುವ ಪದ್ಧತಿ ಇದ್ದರೂ, ಪಟೇಲ್ ಅವರು ಭಗವದ್ಗೀತೆಯ ಮೇಲೆ ಕೈಯಿರಿಸಿ ಪ್ರಮಾಣ ವಚನ ಸ್ವೀಕರಿಸಿದರು.
ಅಟಾರ್ನಿ ಜನರಲ್ ಪಾಮ್ ಬೋಂಡಿ ಅವರು ಪಟೇಲ್ ಅವರಿಗೆ ಪ್ರಮಾಣ ವಚನ ಬೋಧಿಸಿದರು. ಗೀತೆಯ ಮೇಲೆ ನಿಮ್ಮ ಕೈಯನ್ನು ಇರಿಸಿ ಮತ್ತು ನಿಮ್ಮ ಬಲಗೈಯನ್ನು ಮೇಲಕ್ಕೆತ್ತಿ ಎಂದು ಬೋಂಡಿ ಹೇಳಿದರು.
ಪ್ರಮಾಣ ವಚನ ಸ್ವೀಕರಿಸುವ ವೇಳೆ ಕಾಶ್ ಪಟೇಲ್ ಪಕ್ಕದಲ್ಲಿ ಅವರ ಗೆಳತಿ ಮತ್ತು ಕುಟುಂಬ ಸದಸ್ಯರು ನಿಂತಿದ್ದರು. ಇತರೆ ಕುಟುಂಬ ಸದಸ್ಯರು ಮುಂದಿನ ಸಾಲಿನಲ್ಲಿ ಕುಳಿತಿದ್ದರು. ಎಫ್‌ಬಿಐನ 9ನೇ ನಿರ್ದೇಶಕರಾಗಿ ಕಾಶ್ ಪಟೇಲ್ ನೇಮಕಗೊಂಡಿದ್ದು, ಎಫ್‌ಬಿಐ ಮುಖ್ಯಸ್ಥರಾಗಿದ್ದ ಕ್ರಿಸ್ಟೋಫರ್ ವ್ರೇ ಅವರ ಜಾಗಕ್ಕೆ ಪಟೇಲ್ ನೇಮಕವಾಗಿದ್ದಾರೆ. ಅಂದ್ಹಾಗೆ ಅಮೆರಿಕಾದ ಎಫ್‌ಬಿಐನ ಮೊದಲ ಭಾರತೀಯ ಮೂಲದ ನಿರ್ದೇಶಕ ಎಂಬ ಹಿರಿಮೆ ಕಾಶ್ ಪಟೇಲ್‌ರದ್ದು. ಅಲ್ಲದೇ ಮೊದಲ ಏಷ್ಯನ್ ಎಂಬ ಹೆಗ್ಗಳಿಕೆ ಇದೆ.