ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆಯ ಬಳಿಕ ಯೆಮನ್ ಮೇಲೆ ಭೀಕರ ಮಿಲಿಟರಿ ದಾಳಿ ನಡೆದಿದೆ. ಹೌತಿ ಗುಂಪು ಗಳು ಅಡಗಿರುವ ಪ್ರದೇಶಗಳನ್ನೇ ಅಮೆರಿಕಾ ಮಿಲಿಟರಿ ಟಾರ್ಗೆಟ್ ಮಾಡಿದ್ದು ಅಟ್ಯಾಕ್ ಮುಂದುವರಿದಿದೆ. ಬಾಂಬ್ ದಾಳಿಗೆ ತತ್ತರಿಸಿರುವ ಯೆಮನ್ನಲ್ಲಿ ಒಂದೊಂದು ದೃಶ್ಯವೂ ನರಕ ಸದೃಶ್ಯವಾಗಿದೆ.
ಹೌತಿ ಗುಂಪು ಅಡಗಿರುವ ತಾಣಗಳ ಮೇಲೆ ಅಮೆರಿಕಾ ಸೇನೆ ದಾಳಿ ಮಾಡುತ್ತಿರುವುದಾಗಿ ಹೇಳಿದೆ. ಅಮೆರಿಕಾದ ಮಿಲಿಟರಿ ದಾಳಿಯಲ್ಲಿ ಇದುವರೆಗೂ 20ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದು, ಇದರಲ್ಲಿ ನಾಗರಿಕರು, ಮಕ್ಕಳು ಸೇರಿದ್ದಾರೆ. ಯೆಮನ್ ರಾಜಧಾನಿ ಸನಾದ ಮೇಲೂ ಅಮೆರಿಕಾ ದಾಳಿ ಮಾಡಿದ್ದು, ಮೃತರ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ.
ಅಮೆರಿಕಾ ದಾಳಿಗೆ ಕಾರಣವೇನು?
ಗಾಜಾ ಗಡಿ ಸಂಘರ್ಷದ ಹಿನ್ನೆಲೆಯಲ್ಲಿ ಹೌತಿ ಗುಂಪು ಇಸ್ರೇಲ್ ಹಾಗೂ ಕೆಂಪು ಸಮುದ್ರದ ಹಡಗುಗಳ ಮೇಲೆ ದಾಳಿ ಮಾಡುತ್ತಿದ್ದರು. ಜನವರಿಯಲ್ಲಿ ಅಧಿಕಾರ ಸ್ವೀಕಾರ ಮಾಡಿದ ಬಳಿಕ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೌತಿ ಸಂಘಟನೆಗೆ ಖಡಕ್ ಎಚ್ಚರಿಕೆಯನ್ನು ನೀಡಿದ್ದರು.
ಡೊನಾಲ್ಡ್ ಟ್ರಂಪ್ ಅಧಿಕಾರ ಸ್ವೀಕರಿಸಿದ ಬಳಿಕ ಯೆಮನ್ ಮೇಲೆ ಅಮೆರಿಕಾ ಮಾಡಿರುವ ಮೊದಲ ಹಾಗೂ ಭಯಾನಕ ಮಿಲಿಟರಿ ಅಟ್ಯಾಕ್ ಇದಾಗಿದೆ. ಯೆಮನ್ನಲ್ಲಿ ಅಡಗಿರುವ ಹೌತಿ ಅಡಗುತಾಣಗಳ ಮೇಲೆ ವೈಮಾನಿಕ ದಾಳಿಗಳು ನಡೆದಿದೆ. ಯೆಮನ್ನಲ್ಲಿ ಹೌತಿ ಗುಂಪು ನೆಲೆಸಿರುವ ತಾಣ ಸಂಪೂರ್ಣವಾಗಿ ಛಿದ್ರ, ಛಿದ್ರವಾಗುತ್ತಿದೆ.
ಯೆಮನ್ ಮೇಲೆ ಅಮೆರಿಕಾ ಮಿಲಿಟರಿ ಪಡೆ ಬಾಂಬ್ಗಳ ಸುರಿಮಳೆಯನ್ನೇ ಸುರಿಸಿದೆ. ಇಸ್ರೇಲ್, ಯೆಮನ್ ಸಂಘರ್ಷದಲ್ಲಿ ಅಮೆರಿಕಾ ಎಂಟ್ರಿಯಾಗಿರುವುದು ಯುದ್ಧದ ವಾತಾವರಣವನ್ನು ಸೃಷ್ಟಿಸಿದೆ. ಯೆಮನ್ನಲ್ಲಿ ಅಡಗಿರುವ ಹೌತಿ ಗಳ ಮೇಲೆ ಅಮೆರಿಕಾ ಮತ್ತಷ್ಟು ತೀವ್ರಗತಿಯ ದಾಳಿ ಮಾಡುವ ಮುನ್ಸೂಚನೆಗಳನ್ನು ನೀಡಿದೆ.