ದಂತೇವಾಡ: ಛತ್ತೀಸ್‌ಗಢದ ಬಸ್ತಾರ್ ಪ್ರದೇಶದಲ್ಲಿ ಬುಡಕಟ್ಟು ಜನಾಂಗದವರ ಅಭಿವೃದ್ಧಿಯನ್ನು ತಡೆಯಲು ನಕ್ಸಲರಿಂದ ಸಾಧ್ಯವಿಲ್ಲ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶನಿವಾರ ಹೇಳಿದ್ದಾರೆ.
ಇಂದು ರಾಜ್ಯ ಸರ್ಕಾರದ ‘ಬಸ್ತರ್ ಪಾಂಡಮ್’ ಉತ್ಸವದ ಸಮಾರೋಪ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಅಮಿತ್ ಶಾ, ನಕ್ಸಲೀಯನೊಬ್ಬ ಹತ್ಯೆಯಾದಾಗ ಯಾರೂ ಸಂತೋಷ ಪಡುವುದಿಲ್ಲ. ಅವರು ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಶರಣಾಗಬೇಕು ಎಂದು ಮನವಿ ಮಾಡಿದರು.
ಮಾರ್ಚ್ 2026 ರೊಳಗೆ ನಕ್ಸಲ್ ಹಾವಳಿಯನ್ನು ತೊಡೆದುಹಾಕಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಪುನರುಚ್ಚರಿಸಿದ ಅವರು, ಶರಣಾಗುವವರು ಮುಖ್ಯವಾಹಿನಿಯ ಭಾಗವಾಗುತ್ತಾರೆ ಮತ್ತು ಉಳಿದವರನ್ನು ಭದ್ರತಾ ಪಡೆಗಳು ನೋಡಿಕೊಳ್ಳುತ್ತವೆ ಎಂದು ಎಚ್ಚರಿಸಿದರು.
ಬಸ್ತರ್‌ನಲ್ಲಿ ಗುಂಡು ಹಾರಿಸಿ, ಬಾಂಬ್‌ಗಳನ್ನು ಸ್ಫೋಟಿಸುತ್ತಿದ್ದ ದಿನಗಳು ಮುಗಿದಿವೆ. ನಕ್ಸಲೀಯ ಸಹೋದರರು ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಮುಖ್ಯವಾಹಿನಿಗೆ ಸೇರಬೇಕೆಂದು ನಾನು ಒತ್ತಾಯಿಸುತ್ತೇನೆ. ನೀವು ನಮ್ಮವರು. ಯಾವುದೇ ಒಬ್ಬ ನಕ್ಸಲನನ್ನು ಹತ್ಯೆ ಮಾಡಿದಾಗ ಯಾರೂ ಖುಷಿ ಪಡುವುದಿಲ್ಲ. ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಶರಣಾಗಿ ಮತ್ತು ಮುಖ್ಯವಾಹಿನಿಗೆ ಬನ್ನಿ ಎಂದು ಕೇಳಿಕೊಂಡರು.
ನೀವು ಶಸ್ತ್ರಾಸ್ತ್ರಗಳನ್ನು ಕೈಗೆ ತೆಗೆದುಕೊಳ್ಳುವ ಮೂಲಕ ನಿಮ್ಮ ಬುಡಕಟ್ಟು ಸಹೋದರ ಸಹೋದರಿಯರ ಅಭಿವೃದ್ಧಿಯನ್ನು ತಡೆಯಲು ಸಾಧ್ಯವಿಲ್ಲ. ಅಭಿವೃದ್ಧಿಯ ಪ್ರಕ್ರಿಯೆಯ ಭಾಗವಾಗಲು ಶರಣಾಗುವ ನಕ್ಸಲರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಸಂಪೂರ್ಣ ರಕ್ಷಣೆ ಸಿಗುತ್ತದೆ ಎಂದು ಅಮಿತ್ ಶಾ ಹೇಳಿದರು.
ಈ ಪ್ರದೇಶಕ್ಕೆ ಅಭಿವೃದ್ಧಿಯ ಅಗತ್ಯವಿದೆ. ಪ್ರಧಾನಿ ನರೇಂದ್ರ ಮೋದಿ 5 ವರ್ಷಗಳಲ್ಲಿ ಬಸ್ತಾರ್‌ಗೆ ಎಲ್ಲವನ್ನೂ ನೀಡಲು ಬಯಸುತ್ತಾರೆ. ಬಸ್ತಾರ್ 50 ವರ್ಷಗಳಲ್ಲಿ ಅಭಿವೃದ್ಧಿಯನ್ನು ಕಂಡಿಲ್ಲ. ಬಸ್ತಾರ್‌ನ ಜನರು ಸಾಮೂಹಿಕವಾಗಿ ತಮ್ಮ ಮನೆಗಳು ಮತ್ತು ಗ್ರಾಮಗಳನ್ನು ನಕ್ಸಲೀಯ ಪ್ರಭಾವದಿಂದ ಮುಕ್ತಗೊಳಿಸಲು ನಿರ್ಧರಿಸಿದಾಗ ಮಾತ್ರ ನಿಜವಾದ ಪ್ರಗತಿ ಸಾಧ್ಯ ಎಂದು ಅಮಿತ್ ಶಾ ಒತ್ತಿ ಹೇಳಿದರು.
“2025ರಲ್ಲಿ ಇಲ್ಲಿಯವರೆಗೆ ಒಟ್ಟು 521 ನಕ್ಸಲೀಯರು ಶಸ್ತ್ರಾಸ್ತ್ರಗಳನ್ನು ತ್ಯಜಿಸಿದ್ದಾರೆ, ಆದರೆ 2024ರಲ್ಲಿ 881 ನಕ್ಸಲರು ಶರಣಾಗಿದ್ದಾರೆ. ಅಭಿವೃದ್ಧಿಗೆ ಶಸ್ತ್ರಾಸ್ತ್ರ, ಐಇಡಿ ಮತ್ತು ಗ್ರೆನೇಡ್‌ಗಳ ಅಗತ್ಯವಿಲ್ಲ ಎಂದು ಅರ್ಥಮಾಡಿಕೊಂಡ ನಕ್ಸಲೀಯರು ಕಂಪ್ಯೂಟರ್ ಮತ್ತು ಪೆನ್ನುಗಳಿಗೆ ಶರಣಾಗಿದ್ದಾರೆ” ಎಂದು ಅವರು ಹೇಳಿದರು.