ನವದೆಹಲಿ: ಇಂದು ಲೋಕಸಭಾ ಅಧಿವೇಶನದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಹತ್ವದ ಘೋಷಣೆಯೊಂದನ್ನು ಮಾಡಿದ್ದಾರೆ. ಪಹಲ್ಗಾಮ್ ದಾಳಿಗೆ ಕಾರಣರಾಗಿದ್ದ ಮೂವರು ಉಗ್ರರನ್ನು ಆಪರೇಷನ್ ಮಹಾದೇವ ಕಾರ್ಯಾಚರಣೆಯಲ್ಲಿ ಎನ್‌ಕೌಂಟರ್ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಪಹಲ್ಗಾಮ್ ಭಯೋತ್ಪಾದಕ ದಾಳಿ ನಡೆದ ದಿನವೇ ಏಪ್ರಿಲ್ 22ರಂದು ಆಪರೇಷನ್ ಮಹಾದೇವ್ ಅನ್ನು ಪ್ರಾರಂಭಿಸಲಾಯಿತು ಎಂದು ಅಮಿತ್ ಶಾ ಲೋಕಸಭೆಯಲ್ಲಿ ಮಾಹಿತಿ ನೀಡಿದ್ದಾರೆ.
ಆ ಸಂಜೆ ಶ್ರೀನಗರ ಉನ್ನತ ಮಟ್ಟದ ಭದ್ರತಾ ಸಭೆ ನಡೆಸಲಾಯಿತು. ಅಲ್ಲಿ ಭಯೋತ್ಪಾದಕರು ದೇಶ ಬಿಟ್ಟು ಪಲಾಯನ ಮಾಡಲು ಬಿಡಬಾರದು ಎಂದು ನಿರ್ಧರಿಸಲಾಯಿತು. ಅದರಿಂದ ಆರಂಭವಾಗಿದ್ದೇ ಆಪರೇಷನ್ ಮಹಾದೇವ್ ಕಾರ್ಯಾಚರಣೆ ಎಂದು ಅಮಿತ್ ಶಾ ಮಾಹಿತಿ ನೀಡಿದ್ದಾರೆ.
ನಿನ್ನೆ ಎನ್ಕೌಂಟರ್ನಲ್ಲಿ ಮೃತನಾದ ಸುಲೇಮಾನ್ ಪಹಲ್ಗಾಮ್ ದಾಳಿಯ ಮಾಸ್ಟರ್ ಮೈಂಡ್ ಆಗಿದ್ದ. ಇನ್ನಿಬ್ಬರು ಅಫ್ಘಾನ್ ಮತ್ತು ಜಿಬ್ರಾನ್ ಆತನ ಸಹಚರರಾಗಿದ್ದರು. ಇವರೆಲ್ಲರೂ ಪಾಕ್ ಮೂಲದ ನಿಷೇಧಿತ ಗುಂಪು ಲಷ್ಕರ್-ಎ-ತೈಬಾಗೆ ಸೇರಿದ ಪ್ರಮುಖ ಭಯೋತ್ಪಾದಕರು. ಪಹಲ್ಗಾಮ್ ದಾಳಿಯಲ್ಲಿ ಇವರದ್ದೇ ಕೈವಾಡವಿತ್ತು. 26 ಜನರನ್ನು ಕೊಂದವರನ್ನು ಹತ್ಯೆ ಮಾಡಲಾಗಿದೆ ಎಂದು ಅಮಿತ್ ಶಾ ಸದನಕ್ಕೆ ತಿಳಿಸಿದ್ದಾರೆ.