ಬೆಂಗಳೂರು : ತಾನು ಪ್ರಧಾನಮಂತ್ರಿ ಕಚೇರಿಯಲ್ಲಿ ಕೆಲಸ ಮಾಡುವ ಉನ್ನತ ಅಧಿಕಾರಿಯಂತೆ ಹೇಳಿಕೊಂಡು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ದತ್ತು ಪುತ್ರ ಎಂದು ಬಿಂಬಿಸಿ, ವೈದ್ಯರೊಬ್ಬರಿಗೆ 2.7 ಕೋಟಿ ರೂಪಾಯಿಗಳಷ್ಟು ವಂಚಿಸಿದ ಆರೋಪಿಯನ್ನು ವಿಜಯನಗರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿಯನ್ನು ವಿಜಯನಗರದ ನಿವಾಸಿ ಸುಜಯ್ ಅಲಿಯಾಸ್ ಸುಜಯೇಂದ್ರ ಎಂದು ಗುರುತಿಸಲಾಗಿದೆ.
ಸುಜಯೇಂದ್ರ, ಜಮ್ಮು ಕಾಶ್ಮೀರ ಮೂಲದ ವೈದ್ಯರನ್ನು ಸಂಪರ್ಕಿಸಿ, ತಾನು PMO ಅಧಿಕಾರಿ ಎಂದು ಹೇಳಿಕೊಂಡು ನಂಬಿಕೆ ಗಳಿಸಿಕೊಂಡಿದ್ದಾನೆ. ಜೊತೆಗೆ,ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಜೊತೆ ಸ್ಟೇಜ್ ಹಂಚಿಕೊಂಡಿದ್ದಂತೆ ಫೋಟೋಗಳನ್ನು ತೋರಿಸಿ ವೈದ್ಯರನ್ನು ಪ್ರಭಾವಿತಗೊಳಿಸಿ ವಂಚನೆ ನಡೆಸಿದ್ದಾನೆ.
ದೇವನಹಳ್ಳಿಯ ಬಳಿ ಅತಿ ಆಧುನಿಕ ವಿಲ್ಲಾ ಮಾದರಿಯಲ್ಲಿ ಆಯುರ್ವೇದ ಆಸ್ಪತ್ರೆ ತೆರೆಯಲು ಸರ್ಕಾರದಿಂದ ಅವಕಾಶ ನೀಡಲಾಗುತ್ತದೆ ಎಂದು ವೈದ್ಯರಿಗೆ ಭರವಸೆ ನೀಡುತ್ತಾ, ಹಂತ ಹಂತವಾಗಿ 2.7 ಕೋಟಿ ರೂಪಾಯಿ ವಸೂಲಿ ಮಾಡಿದ್ದ ಮಾಹಿತಿ ತಿಳಿದು ಬಂದಿದೆ.
ವಂಚನೆಗೆ ಒಳಗಾದ ವೈದ್ಯರು ದೂರು ನೀಡಿದ ಬಳಿಕ, ವಿಜಯನಗರ ಪೊಲೀಸರು ತನಿಖೆ ನಡೆಸಿ ಸುಜಯೇಂದ್ರನ ಕಳ್ಳಾಟವನ್ನು ಬಹಿರಂಗಪಡಿಸಿದ್ದಾರೆ. ವಿಚಾರಣೆಯಲ್ಲಿ, ಸುಜಯೇಂದ್ರನ ವಂಚನೆಯ ನಿಜವಾದ ವಿವರಗಳು ಬೆಳಕಿಗೆ ಬಂದಿವೆ.
ಆರೋಪಿಯ ಬಗ್ಗೆ ವಿಶೇಷ ವಿಷಯವೆಂದರೆ, ಸುಜಯೇಂದ್ರ ಎರಡು ಬಾರಿ ಜೈಲು ಪಾಳಾಗಿರುವ ಹಳೇ ಅಪರಾಧಿ ಮತ್ತುಈಗಾಗಲೇ ನಾಲ್ಕು ಚೆಕ್ ಬೌನ್ಸ್ ಪ್ರಕರಣಗಳು ದಾಖಲಾಗಿವೆ. ಇಷ್ಟಾದರೂ, ಉಪಮುಖ್ಯಮಂತ್ರಿ ಜೊತೆ ಸ್ಟೇಜ್ ಹಂಚಿಕೊಂಡಂತೆ ಫೋಟೋಗಳನ್ನು ತೋರಿಸಿ ವಂಚನೆ ನಡೆಸಿದುದೇ ಸ್ಫೋಟಕಾರಿ ಸಂಗತಿ. ಈ ಪ್ರಕರಣ ಸಂಬಂಧ ವಿಜಯನಗರ ಪೊಲೀಸರು ಹೆಚ್ಚಿನ ತನಿಖೆಯನ್ನು ಮುಂದುವರೆಸಿದ್ದಾರೆ.
































