ಬೆಂಗಳೂರು: 38 ತಿಂಗಳ ಹಿಂಬಾಕಿ, ಹೊಸ ವೇತನ ಪರಿಷ್ಕರಣೆ, 2021 ರ ಮುಷ್ಕರದ ವೇಳೆ ವಜಾ ಮಾಡಲಾದ ನೌಕರರ ಮರು ನೇಮಕಾತಿಗೆ ಆಗ್ರಹಿಸಿ ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿ ಮುಷ್ಕರಕ್ಕೆ ಕರೆ ನೀಡಿದೆ. ಆಗಸ್ಟ್ 5 ರಿಂದ ನಾಲ್ಕು ಸಾರಿಗೆ ನಿಗಮಗಳ ನೌಕರರು ಅನಿರ್ದಿಷ್ಟಾವಧಿ ಮುಷ್ಕರ ಮಾಡಲು ನಿರ್ಧಾರ ಮಾಡಿದ್ದು, ಈಗಾಗಲೇ ಸಿಎಂ ಹಾಗೂ ನಾಲ್ಕು ನಿಗಮದ ಎಂಡಿಗಳಿಗೆ ನೊಟೀಸ್ ನೀಡಿದ್ದಾರೆ.
ಸಾರಿಗೆ ನೌಕರರ ಪ್ರಮುಖ ಎರಡು ಬೇಡಿಕೆಗಳೆಂದರೆ, ಬಾಕಿ ವೇತನ ಬಿಡುಗಡೆ ಮತ್ತು ಹೊಸ ವೇತನದಲ್ಲಿ ಪರಿಷ್ಕರಣೆ ಮಾಡಬೇಕು ಎಂಬುದಾಗಿದೆ. ಇದನ್ನು ಶೀಘ್ರ ಮಾಡುವಂತೆ ನೌಕರರು ಆಗ್ರಹಿಸಿದ್ದಾರೆ. ಮಾಡದಿದ್ದರೆ ಬಸ್ ಸಂಚಾರ ಸ್ಥಗಿತಗೊಳಿಸಿ ಮುಷ್ಕರ ನಡೆಸುವುದು ಎಚ್ಚರಿಸಿದ್ದಾರೆ.
ನಾವು ಎಸ್ಮಾ, ವಜಾಗೊಳಿಸುವ ತಂತ್ರಗಳಿಗೆ ಹೆದರುವ ಮಾತೇ ಇಲ್ಲ ಎಂದು ಫ್ರೀಡಂ ಪಾರ್ಕ್ನಲ್ಲಿ ಸಾಮೂಹಿಕ ಉಪವಾಸ ಸತ್ಯಾಗ್ರಹ ಮಾಡುವ ಮೂಲಕ ಸರ್ಕಾರಕ್ಕೆ ಸಾರಿಗೆ ನೌಕರರು ಎಚ್ಚರಿಕೆ ನೀಡಿದ್ದಾರೆ.
ಒಟ್ಟಿನಲ್ಲಿ ರಾಜ್ಯದ ಮಹಿಳೆಯರಿಗೆ ಶಕ್ತಿ ಯೋಜನೆ ಮೂಲಕ ಶಕ್ತಿ ತುಂಬಿದ್ದ ಸರ್ಕಾರ, ಸಾರಿಗೆ ನೌಕರರ ಬೇಡಿಕೆಗಳನ್ನು ಈಡೇರಿಸುತ್ತದೆಯೇ ಅಥವಾ ಹಿಂದಿನಂತೆ ಮನವೊಲಿಸಿ ಮುಷ್ಕರ ವಾಪಸ್ಸು ಪಡೆಯುವಂತೆ ಮಾಡುತ್ತದೆಯಾ ಎಂಬುದನ್ನು ನೋಡಬೇಕಿದೆ.