ಒಟ್ಟಾವಾ : ಭಾರತೀಯ ಪ್ರಜೆಯೊಬ್ಬನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಕೆನಡಾದ ರಾಕ್‌ಲ್ಯಾಂಡ್ ಪ್ರದೇಶದಲ್ಲಿ ನಡೆದಿದೆ ಎಂದು ಕೆನಡಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಶನಿವಾರ ಮಾಹಿತಿ ನೀಡಿದೆ.
ಒಟ್ಟಾವಾ ಬಳಿಯ ರಾಕ್‌ಲ್ಯಾಂಡ್‌ನಲ್ಲಿ ಚಾಕುವಿನಿಂದ ಇರಿದು ಭಾರತೀಯನನ್ನು ಕೊಲೆ ಮಾಡಿರುವ ದುರಂತದ ಘಟನೆಗೆ ನಾವು ತೀವ್ರ ದುಃಖಿತರಾಗಿದ್ದೇವೆ. ಶಂಕಿತ ಆರೋಪಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಸ್ಥಳೀಯ ಸಮುದಾಯ ಸಂಘದ ಮೂಲಕ ಕೊಲೆಯಾದ ವ್ಯಕ್ತಿಯ ಸಂಬಂಧಿಕರಿಗೆ ಸಾಧ್ಯವಿರುವ ಎಲ್ಲ ಸಹಾಯವನ್ನು ಒದಗಿಸಲು ನಾವು ನಿಕಟ ಸಂಪರ್ಕದಲ್ಲಿದ್ದೇವೆ ಎಂದು ಭಾರತೀಯ ರಾಯಭಾರಿ ಕಚೇರಿ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದೆ.
ಇಂದು ಬೆಳಿಗ್ಗೆ ಕ್ಲಾರೆನ್ಸ್-ರಾಕ್‌ಲ್ಯಾಂಡ್‌ನಲ್ಲಿ ಓರ್ವನನ್ನು ಕೊಲೆ ಮಾಡಲಾಗಿದೆ. ಆರೋಪಿಯನ್ನು ಬಂಧಿಸಲಾಗಿದೆ ಎಂದು ವರದಿಯೊಂದು ತಿಳಿಸಿದೆ. ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ.